Breaking
Sat. Apr 20th, 2024

ಭದ್ರಾವತಿ – ಸಮಾಜ ಸೇವೆ ನಮ್ಮ ರಕ್ತದಲ್ಲೆ ಬಂದಿದೆ : ಗೀತಾ ಶಿವರಾಜ್ ಕುಮಾರ್

By Mooka Nayaka News Mar 26, 2024
Spread the love

ಭದ್ರಾವತಿ: ಈ ನಾಡಿಗೆ ವಿಶ್ವ, ಆರಾಧನಾ, ಅಕ್ಷಯ, ಆಶ್ರಯ, ಗ್ರಾಮೀಣ ಕೃಪಾಂಕ ಹಾಗೂ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿ ಕೋಟ್ಯಾಂತರ ಜನರಿಗೆ ಅನುಕೂಲ ಮಾಡಿರುವ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಪುತ್ರಿ ಆಗಿರುವ ನನಗೆ ಸಮಾಜ ಸೇವೆ ರಕ್ತಗತವಾಗಿ ಬಂದಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಿಳಿಸಿದರು.

ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ ಸಹೋದರ ಬಿ.ಕೆ ಶಿವಕುಮಾರ್ ಅವರ ಮನೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಚುನಾವಣಾ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ಎಸ್. ಬಂಗಾರಪ್ಪನವರು ಈ ನಾಡಿಗೆ ನೀಡಿದ ಕೊಡುಗೆಯನ್ನು ಇನ್ನೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ, ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರಿಗೆ ಅನುಕೂಲವಾಗಿರುವಾಗ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ನನಗೆ ಒಮ್ಮೆ ಅಧಿಕಾರ ನೀಡಿದ್ದಲ್ಲಿ ಸಹೋದರ ಮಧು ಬಂಗಾರಪ್ಪ ಹಾಗೂ ಪಕ್ಷದ ಜನಪ್ರತಿನಿಧಿಗಳ ಸಹಕಾರದಿಂದ ಈ ಜಿಲ್ಲೆಯ ಚಿತ್ರಣವನ್ನೇ ಬದಲಾಯಿಸುವ ಶಕ್ತಿ ಇದೆ, ಅದಕ್ಕೆ ನಿಮ್ಮ ಸಹಕಾರ ಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

ಪಕ್ಷದ ವಕ್ತಾರ ಹಾಗೂ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಈ ಬಾರಿ ಗೀತಾ ಶಿವರಾಜ್ ಕುಮಾರ್ ರವರ ಗೆಲುವು ಖಚಿತವಾಗಲಿದೆ, ಬಿಜೆಪಿಯಿಂದ ಬಂಡೆದ್ದಿರುವ ಕೆ.ಎಸ್. ಈಶ್ವರಪ್ಪ ಪುಕ್ಕಲು ರಾಜಕಾರಣಿ, ಜಿಲ್ಲೆಯಲ್ಲಿರುವ ದಲಿತ ಹಾಗೂ ಹಿಂದುಳಿದ ಮತಗಳ ವಿಭಜಿಸಲು ಯಡಿಯೂರಪ್ಪ ಹಾಗೂ ಈಶ್ವರಪ್ಪರ ನಡುವೆ ಹೊಂದಾಣಿಕೆ ರಾಜಕೀಯ ನಡೆದಿದೆ, ಇದರ ಪ್ರತಿಫಲವೇ ಈ ಚುನಾವಣಾ ನಾಟಕ, ಈಶ್ವರಪ್ಪ ಚುನಾವಣೆಗೆ ನಿಲ್ಲದಿದ್ದರೆ 40% ಕಮಿಷನ್ ವಿಚಾರದಲ್ಲಿ ಐ‌. ಟಿ,ಈ.ಡಿ ರೇಡ್ ಖಚಿತವಾಗಲಿದೆ ಎಂದರು.

ಅಧ್ಯಕ್ಷತೆಯನ್ನು ಶಾಸಕ ಬಿ.ಕೆ ಸಂಗಮೇಶ್ವರ ವಹಿಸಿದ್ದರು, ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಜಿಲ್ಲಾಧ್ಯಕ್ಷ ಸುಂದರೇಶ್, ಕೆಪಿಸಿಸಿ ಸದಸ್ಯರಾದ ಬಲ್ಕಿಸ್ ಬಾನು ಪಕ್ಷದ ಮುಖಂಡರುಗಳಾದ ನಾಗರಾಜ್, ಲತಾಚಂದ್ರಶೇಖರ್, ಎಸ್. ಕುಮಾರ್, ಮಣಿ ಶೇಖರ್, ಬಿ.ಕೆ ಮೋಹನ್, ಷಡಕ್ಷರಿ, ಗಣೇಶ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು, ವಕೀಲರಾದ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related Post