ಭದ್ರಾವತಿ: ನಾಡಿನ ಜನಮನದಲ್ಲಿ ಸದಾ ಜೀವಂತವಾಗಿರುವ ವರನಟ ಕರ್ನಾಟಕ ರತ್ನ ಡಾ. ರಾಜಕುಮಾರ್ ಹಾಗೂ ಯುವರತ್ನ, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಅಪಾರ ಪ್ರೀತಿಗೆ ಸಾಕ್ಷಿಯಾಗಿ ಭದ್ರಾವತಿಯಲ್ಲಿ ನಿರ್ಮಿಸಲಾದ ದೇವಾಲಯ ಹಾಗೂ ಕಂಚಿನ ಪ್ರತಿಮೆಗಳನ್ನು ಗುರುವಾರ ಲೋಕಾರ್ಪಣೆಗೊಳಿಸಲಾಯಿತು.
ನಗರದ ಬಿ.ಎಚ್ ರಸ್ತೆ, ಚಾಮೇಗೌಡ ಏರಿಯಾ, ನಗರಸಭೆ ಮಾರುಕಟ್ಟೆ ಸಮೀಪ ಅಭಿಮಾನಿಗಳಿಂದ ನಿರ್ಮಿಸಲಾದ ಈ ದೇವಾಲಯವನ್ನು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ರಾಜಕುಮಾರ್ ಉದ್ಘಾಟಿಸಿದರು. ಅಭಿಮಾನಿಗಳ ಭಕ್ತಿಭಾವ, ಸ್ಮರಣಾರ್ಥ ಗೌರವ ಮತ್ತು ನಾಡಿನ ಸಾಂಸ್ಕೃತಿಕ ಒಡನಾಟ ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಮಾತನಾಡಿ, ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರು ಕಲೆಯ ಮೂಲಕ ಸಮಾಜಕ್ಕೆ ನೀಡಿದ ಮೌಲ್ಯಗಳು ಎಂದಿಗೂ ಮರೆಯಲಾಗದಂತಿವೆ. ಇವರಿಬ್ಬರ ಜೀವನ ಶಿಸ್ತು, ಸರಳತೆ ಮತ್ತು ಸೇವಾಭಾವದ ಪ್ರತೀಕವಾಗಿದ್ದು, ಅಭಿಮಾನಿಗಳು ದೇವಾಲಯ ನಿರ್ಮಿಸಿರುವುದು ಅತ್ಯಂತ ಅರ್ಥಪೂರ್ಣ ಕಾರ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್, ಭದ್ರಾವತಿಯಲ್ಲಿ ರಾಜಕುಮಾರ್ ಕುಟುಂಬದ ಅಭಿಮಾನಿಗಳ ಬಳಗ ದೊಡ್ಡದಾಗಿದ್ದು, ದೇವಾಲಯ ನಿರ್ಮಾಣ ಮಾತ್ರವಲ್ಲದೆ ಪ್ರಮುಖ ರಸ್ತೆಗಳಿಗೆ ಅವರ ಹೆಸರನ್ನು ನಾಮಕರಣ ಮಾಡಿರುವುದು ಜನರ ಮನದ ಗೌರವವನ್ನು ತೋರಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಅಶ್ವಿನಿ ರಾಜಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಪ್ರಮುಖರಾದ ಎಂ. ಶ್ರೀಕಾಂತ್, ಬಿ.ಕೆ. ಜಗನ್ನಾಥ್, ಬಿ.ಕೆ. ಶಿವಕುಮಾರ್, ಎಚ್.ಎಲ್. ಷಡಾಕ್ಷರಿ, ಬಿ.ಎಸ್. ಗಣೇಶ್, ಬಿ.ಎಸ್. ಬಸವೇಶ್, ನಗರಸಭೆ ಸದಸ್ಯ ಜಾರ್ಜ್, ಅಭಿಮಾನಿಗಳ ಸಂಘದ ಅಧ್ಯಕ್ಷ ಬಿ.ಎಂ. ಅರ್ಪಿತ್ ಕುಮಾರ್ (ಅಪ್ಪು), ಉಪಾಧ್ಯಕ್ಷರು ಜಿ.ಕೆ. ದೇವೇಂದ್ರ (ದೇವ), ವೆಂಕಟೇಶ್, ಖಜಾಂಚಿ ಲಲಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಟಿ. ರವಿಕುಮಾರ್, ಕಾರ್ಯದರ್ಶಿ ಎಲ್. ಶಂಕರ್, ಸಹ ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ಗೋಪಿ, ಭೂಮಿನಾಥನ್, ಮಹೇಶ್, ಸುಮನ್, ಸುನೀಲ್, ರಕ್ಷಿತ್, ಅಮೋಘ, ಪ್ರಜ್ವಲ್, ನಿತಿನ್, ಮದನ್, ಕೆ.ಸಿ. ಮನು ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಹಾಗೂ ಇತರೆ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
