ಭದ್ರಾವತಿ: ಡಾ. ರಾಜಕುಮಾರ್ ಹಾಗೂ ಡಾ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಗರಸಭೆ ವಾರ್ಡ್ ಸಂಖ್ಯೆ–೩ರ ಚಾಮೇಗೌಡ ಏರಿಯಾ, ಡಾ. ರಾಜಕುಮಾರ್ ರಸ್ತೆ (ಬಿ.ಎಚ್ ರಸ್ತೆ)ಯಲ್ಲಿ ನಗರಸಭೆ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ಬಳಿ ನಿರ್ಮಿಸಿರುವ ಡಾ. ರಾಜಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ರ ದೇಗುಲ ಹಾಗೂ ಕಂಚಿನ ಪ್ರತಿಮೆಯ ಲೋಕಾರ್ಪಣೆ ಜ.೨೨ರಂದು ಗುರುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ ಎಂದು ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ ಸಂಗಮೇಶ್ವರ್ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ರಾಜಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ಅವರು ಚಿತ್ರರಂಗ ಮಾತ್ರವಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿಯೂ ಅಪಾರ ಕೊಡುಗೆ ನೀಡಿದ್ದಾರೆ. ನಾಡಿನ ಜನರ ಹೃದಯದಲ್ಲಿ ಸದಾ ನೆಲೆಸಿರುವ ಈ ಮಹಾನ್ ವ್ಯಕ್ತಿಗಳ ಸ್ಮರಣಾರ್ಥ ಅಭಿಮಾನಿಗಳು ದೇಗುಲ ಹಾಗೂ ಪ್ರತಿಮೆಯನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ರ ಪತ್ನಿ ಅಶ್ವಿನಿ ರಾಜಕುಮಾರ್ ದೇಗುಲ ಹಾಗೂ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ, ವಿವಿಧ ಜನಪ್ರತಿನಿಧಿಗಳು, ನಗರಸಭೆ ಸದಸ್ಯರು, ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ೧೨.೩೦ಕ್ಕೆ ಬೃಹತ್ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ ೭ ಗಂಟೆಗೆ ಶ್ರೀ ರಾಜ್ ಮೆಲೋಡಿ ಮೇಕರ್ಸ್ ವತಿಯಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪದಾಧಿಕಾರಿಗಳು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್, ನಗರಸಭೆ ಸದಸ್ಯ ಜಾರ್ಜ್, ಸಂಘದ ಪದಾಧಿಕಾರಿಗಳಾದ ಅಧ್ಯಕ್ಷ ಬಿ.ಎಂ ಅರ್ಪಿತ್ ಕುಮಾರ್(ಅಪ್ಪು), ಉಪಾಧ್ಯಕ್ಷರಾದ ಜಿ.ಕೆ ದೇವೇಂದ್ರ(ದೇವ), ವೆಂಕಟೇಶ್, ಖಜಾಂಚಿ ಲಲಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಟಿ ರವಿಕುಮಾರ್, ಕಾರ್ಯದರ್ಶಿ ಎಲ್. ಶಂಕರ್, ಸಹ ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ಗೋಪಿ, ಭೂಮಿನಾಥನ್, ಮಹೇಶ್, ಎಲ್. ಶಂಕರ್, ಸುಮನ್, ಸುನೀಲ್, ರಕ್ಷಿತ್, ಅಮೋಘ, ಪ್ರಜ್ವಲ್, ನಿತಿನ್, ಮದನ್ ಮತ್ತು ಕೆ.ಸಿ ಮನು ಹಾಗು ಮುಖಂಡರಾದ ದಶರಥಗಿರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
