Trending

ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಗ್ಯಾರಂಟಿ : ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರ ಭರವಸೆ

Spread the love

ಶಿವಮೊಗ್ಗ: ತಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ನೀರಾನೆ ದಾಳಿಯಿಂದ ಸಾವನ್ನಪ್ಪಿದ ಡಾ.ಸಮೀಕ್ಷಾ ರೆಡ್ಡಿ ಅವರ ಸಾವಿಗೆ ಕಾರಣರಾದವರನ್ನು ಶಿಕ್ಷಿಸಲಾಗುವುದು ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಹಾಡ್ಯ ತಿಳಿಸಿದ್ದಾರೆ.

ಶನಿವಾರ ಶಿವಮೊಗ್ಗ ಹೊರವಲಯದ ತಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಘಟನ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನಗೆ ಘಟನೆಯ ಬಗ್ಗೆ ನಿನ್ನೆ (ಶುಕ್ರವಾರ) ಮಾಹಿತಿ ತಿಳಿಯಿತು. ನಾನು ಇಲ್ಲಿನ ನಿರ್ದೇಶಕರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡೆ. ಶಿವಮೊಗ್ಗಕ್ಕೆ ಹೊರಟಿದ್ದೆ. ಆಗ ಸಮೀಕ್ಷಾ ರೆಡ್ಡಿ ಅವರ ಶವವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಾರೆಂದು ತಿಳಿದು ಅವರ ಮನೆಗೆ ಹೋಗಿ ಅಂತಿಮ ನಮನ ಸಲ್ಲಿಸಿದೆ. ಆಕೆಯ ತಂದೆ, ತಾಯಿಗೆ ಸಾಂತ್ವನ ಹೇಳಿ ಬಂದಿದ್ದೇನೆ ಎಂದರು.

ಯಾರೇ ತಪ್ಪಿತಸ್ಥರಾದರೂ ಕ್ರಮ: ಸಮೀಕ್ಷಾ ಅವರು ಆ ಹೊತ್ತಿನಲ್ಲಿ‌ ಒಬ್ಬರೇ ಅಲ್ಲಿಗೆ ಯಾಕೆ ಹೋಗಿದ್ದರು?. ಪ್ರಾಣಿಗಳ ಆರೋಗ್ಯ ಕೆಟ್ಟಾಗ ಬರಬೇಕಾಗುತ್ತದೆ ಸರಿ. ಆದರೆ ಅವರು ನುರಿತ ವೈದ್ಯರ ಜೊತೆಗೆ ಬರಬೇಕಿತ್ತು. ಆಕೆಗೆ ಪ್ರಾಣಿಗಳ ಮೇಲೆ ಇರುವ ಅತಿಯಾದ ಪ್ರೀತಿಯಿಂದ ಬಂದಿರಬಹುದು. ನೀರಾನೆ ಹಿಂದೆ ಮರಿ ಹಾಕಿದ್ದು ಅದು ಸಾವನ್ನಪ್ಪಿತ್ತು. ಇದರಿಂದ ಈಗಿನ ಮರಿ ಸಂರಕ್ಷಣೆ ಮಾಡುವ ಸಲುವಾಗಿ ಆಕೆ ಇಲ್ಲಿಗೆ ಬಂದಿರಬಹುದೇನೋ, ಗೊತ್ತಿಲ್ಲ. ಇಲ್ಲಿ ಯಾರೇ ತಪ್ಪಿತಸ್ಥರಾದರೂ ಕ್ರಮ ತೆಗೆದುಕೊಳ್ಳುವುದು ಗ್ಯಾರಂಟಿ ಎಂದರು.

ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತನಿಖೆ ನಡೆಸಿದಾಗ, ಸಮೀಕ್ಷಾ ಆ ರಾತ್ರಿ ಇಲ್ಲಿನ ನೌಕರರನ್ನು ಕರೆದುಕೊಂಡು ಬಂದಿದ್ದಾರೆ ಎಂಬುದು ತಿಳಿಯಿತು. ಅವರು ಬೇಡ ಅಂತ ಹೇಳಿದ್ರೂ ಸಹ ಪರೀಕ್ಷೆ ನಡೆಸಲು ಬಂದಿದ್ದಾರಂತೆ. ಇಲ್ಲಿ ಏಣಿಯ ಸಹಾಯದಿಂದ ಹತ್ತಿ ಕೆಳಕ್ಕಿಳಿದಿದ್ದಾರೆ. ಈ ವೇಳೆ ನೀರಾನೆ ಹಂಸಿಣಿ ಗಾಬರಿಯಾಗಿದೆ. ಅದು ಅವರ ಬಳಿ ಬಂದಾಗ ಮೊದಲನೇಯವನು ಏಣಿ ಹತ್ತಿ ಹೋಗಿದ್ದಾನೆ. ಆದರೆ ಸಮೀಕ್ಷಾ ಏಣಿ ಹತ್ತುವಾಗ ಬಿದ್ದಿದ್ದಾರೆ.

ಈ ವೇಳೆ ನೀರಾನೆ ದಾಳಿ ಮಾಡಿದೆ ಎಂಬ ಮಾಹಿತಿ ಇದೆ. ಇಲ್ಲಿನ ಸಿಸಿ ಕ್ಯಾಮರಾವನ್ನು ಪೊಲೀಸರು ಸೀಜ್​ ಮಾಡಿದ್ದಾರೆ. ನಿಖರವಾಗಿ ಅವರು ಇಲ್ಲಿ ಯಾರ ಜೊತೆ ಬಂದಿದ್ದರು ಎಂಬುದರ ಕುರಿತು ತನಿಖೆಯಿಂದ ಹೊರಬರುತ್ತದೆ ಎಂದು ರಂಗಸ್ವಾಮಿ ಹಾಡ್ಯ ತಿಳಿಸಿದರು.

[pj-news-ticker]