ಭದ್ರಾವತಿ : ರಾಜಕಾರಣವು ಧರ್ಮದಿಂದ ಪ್ರೇರಿತವಾದ ನೀತಿ ಮತ್ತು ನೈತಿಕ ಮೌಲ್ಯಗಳಿಂದ ಮಾರ್ಗದರ್ಶಿತವಾಗಬೇಕು, ಆದರೆ ಧರ್ಮವನ್ನು ರಾಜಕೀಯದೊಂದಿಗೆ ಬೆಸೆದುಕೊಳ್ಳುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ತರಳಬಾಳು ಹುಣ್ಣಿಮೆ ಮಹೋತ್ಸವದ 6ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹಬಾಳ್ವೆ, ಪರಸ್ಪರ ಗೌರವ ಮತ್ತು ಸೌಹಾರ್ದತೆಯನ್ನು ಬೆಳೆಸಿದಾಗ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯ. ಧರ್ಮವು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ಸಾಧನವಾಗಬೇಕೇ ಹೊರತು, ರಾಜಕೀಯ ಲಾಭದ ಉಪಕರಣವಾಗಬಾರದು ಎಂದರು.
ಮಠಗಳು ಹಾಗೂ ಧಾರ್ಮಿಕ ಕೇಂದ್ರಗಳು ಇನ್ನಷ್ಟು ಬಲಿಷ್ಠವಾಗಲು ಮತ್ತು ಸ್ಥಿರವಾಗಿ ಮುಂದುವರಿಯಲು ಸಮಾಜದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಇವುಗಳನ್ನು ರಕ್ಷಿಸಿ ಬೆಳೆಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು.
ತುಮಕೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, “ಭಾರತ ಒಂದು ಕಟ್ಟುನಿಟ್ಟಾದ ದೇಶವಲ್ಲ; ಭಾರತ ನಮ್ಮ ಜನಾಂಗದ ತಾಯಿ”, ಜಾಗತಿಕ ನಾಗರಿಕತೆಯ ರೂಪುಗೊಳಿಕೆಯಲ್ಲಿ ಭಾರತದ ಮೂಲಭೂತ ಪಾತ್ರವನ್ನು ತೋರಿಸುತ್ತದೆ . ಭಾರತೀಯ ಸಮಾಜದಲ್ಲಿ ಆಳವಾಗಿ ನೆಲೆಸಿರುವ ಸೌಮ್ಯತೆ, ಸತ್ಪ್ರವೃತ್ತಿ ಮತ್ತು ಸೌಹಾರ್ದತೆಯ ಆತ್ಮ ಜಗತ್ತಿಗೆ ಪಾಠವಾಗಬಲ್ಲದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಮಾತನಾಡಿ, ಎಲ್ಲರೂ ಪರಸ್ಪರ ಪ್ರೀತಿಯಿಂದ, ಗೌರವದಿಂದ ನಡೆದುಕೊಂಡಾಗ ಮಾತ್ರ ಶಾಂತಿಯುತ ಹಾಗೂ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ, ಲೋಕದಲ್ಲಿ ನಿಜವಾದ ಅಭಿವೃದ್ಧಿ ಸಾಧಿಸಬೇಕಾದರೆ ಪರಸ್ಪರ ದ್ವೇಷವನ್ನು ತ್ಯಜಿಸುವುದು ಅತ್ಯಗತ್ಯ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಮಾತನಾಡಿ ಭಾರತೀಯ ಸಂಸ್ಕೃತಿಗೆ ವಿಶಿಷ್ಟವಾದ ಸಹನಶಕ್ತಿ ಹಾಗೂ ಬಲವಿದೆ. ಬೌದ್ಧಿಕ ಚಿಂತನೆ, ಯುವಶಕ್ತಿ ಮತ್ತು ಬಲವಾದ ಕುಟುಂಬ ಮೌಲ್ಯಗಳ ಮೂಲಕ ಭಾರತ ಜಾಗತಿಕ ನಾಯಕತ್ವ ವೇದಿಕೆಯಲ್ಲಿ ಗೌರವಾನ್ವಿತ ಸ್ಥಾನ ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಬಿಕೆ ಸಂಗಮೇಶ್ವರ, ಐಎಎಸ್ ಅಧಿಕಾರಿ ಪ್ರಭುಲಿಂಗ ಕವಲಕಟ್ಟಿ,ರೆವರೆಂಡ್ ಫಾದರ್ ಸ್ಟ್ಯಾನ್ಲಿ ಡಿಸೋಜಾ, ಗಣ್ಯರು ಉಪಸ್ಥಿತರಿದ್ದರು
