ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (VISL)ಯಲ್ಲಿ ಡಿಜಿಎಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋವಿಂದರಾಜು (54) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
VISLನ ವಸತಿ ಗೃಹದಲ್ಲೇ ಗೋವಿಂದರಾಜು ಮೃತಪಟ್ಟಿದ್ದಾರೆ. ಕಳೆದ 8 ವರ್ಷಗಳಿಂದ VISLನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಸದ್ಯ ಡಿಜಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೂಲತಃ ತಮಿಳುನಾಡಿನ ಸೇಲಂ ಜಿಲ್ಲೆಯವರಾಗಿದ್ದು, ಅವರ ಕುಟುಂಬ ಸೇಲಂನಲ್ಲೇ ವಾಸವಾಗಿತ್ತು.
ಎರಡು ದಿನಗಳ ಹಿಂದೆ ಗೋವಿಂದರಾಜು ಅವರ ಪತ್ನಿ ಭದ್ರಾವತಿಗೆ ಆಗಮಿಸಿದ್ದರು. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪತ್ನಿಯನ್ನು ರೈಲಿಗೆ ಕಳುಹಿಸಿಕೊಟ್ಟಿದ್ದ ಗೋವಿಂದರಾಜು, ಬಳಿಕ ವಸತಿ ಗೃಹಕ್ಕೆ ವಾಪಸ್ ಆಗಿದ್ದರು.
ಸೋಮವಾರ ಬೆಳಗ್ಗೆ ಪೇಪರ್ ಹಾಕಲು ಬಂದ ಪೇಪರ್ ಬಾಯ್ ಗಮನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಬಳಿಕ ಕಾರ್ಖಾನೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಬಾಗಿಲು ತೆರೆದು ಪರಿಶೀಲಿಸಿದಾಗ ಗೋವಿಂದರಾಜು ಮೃತಪಟ್ಟಿರುವುದು ತಿಳಿದುಬಂದಿದೆ.
ಮಾಹಿತಿ ತಿಳಿದು ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಕುಟುಂಬಸ್ಥರು ಸೇಲಂನಿಂದ ಭದ್ರಾವತಿಗೆ ಆಗಮಿಸಿದ ಬಳಿಕ ಮುಂದಿನ ಕ್ರಮ ಹಾಗೂ ಶವಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
