Trending

ಶಿವಮೊಗ್ಗದ ಪತ್ರಕರ್ತ ಆರ್.ಪಿ. ಭರತ್ ರಾಜ್ ಸಿಂಗ್‌ಗೆ 2025ರ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಗೌರವ

Spread the love

ಶಿವಮೊಗ್ಗ: ಶಿವಮೊಗ್ಗದ ಹಿರಿಯ ಪತ್ರಕರ್ತ ಹಾಗೂ ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾದ ಆರ್. ಪಿ. ಭರತ್ ರಾಜ್ ಸಿಂಗ್ ಅವರು ೨೦೨೫ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ನಿವೃತ್ತ ಪ್ರಾಂಶುಪಾಲರಾದ ಪುಟ್ಟುಸಿಂಗ್ ಅವರ ಪುತ್ರರಾಗಿರುವ ಆರ್. ಪಿ. ಭರತ್ ರಾಜ್ ಸಿಂಗ್ ಅವರು ಬಿ.ಎ ಪದವೀಧರರಾಗಿದ್ದು, ಸಾಮಾಜಿಕ ಬದಲಾವಣೆಯ ಚಳವಳಿಯ ಭಾಗವಾಗಿ ೧೯೮೯ರಲ್ಲಿ ಶಿವಮೊಗ್ಗ ಎಕ್ಸ್‌ಪ್ರೆಸ್ ಕನ್ನಡ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.

ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಪತ್ರಿಕೆ ಮುಂದುವರಿಸಲಾಗದೆ, ೧೯೯೧ರಿಂದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಜನಪರ ಚಳವಳಿಗಾರರಾದ ಶ್ರೀನಿವಾಸ್ ಅಯ್ಯಂಗಾರ್ ಮತ್ತು ಸಿ. ಎಸ್. ಚಂದ್ರಭೂಪಾಲ್ ಅವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ಸಹ್ಯಾದ್ರಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದರು. ಜೊತೆಗೆ ಅನೇಕ ರಾಜ್ಯಮಟ್ಟದ ದಿನಪತ್ರಿಕೆಗಳಿಗೆ ವರದಿಗಳನ್ನು ಬರೆಯುತ್ತಿದ್ದರು.

೧೯೯೭ರಿಂದ ಇಂದಿನವರೆಗೆ ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಪ್ರಾಮಾಣಿಕತೆ ಹಾಗೂ ವೃತ್ತಿಪರತೆಯಿಂದ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆ ಜಿಲ್ಲೆಯ ಪತ್ರಿಕೋದ್ಯಮಕ್ಕೆ ಹೆಮ್ಮೆಯ ವಿಷಯವಾಗಿದೆ.

ಮೂರುವರೆ ದಶಕಗಳಿಗೂ ಅಧಿಕ ಕಾಲ ಪತ್ರಕರ್ತರಾಗಿ ಬದ್ದತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ ಆರ್. ಪಿ. ಭರತ್ ರಾಜ್ ಸಿಂಗ್ ಅವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೨೫ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿಯಲ್ಲಿ ರೂ. ೫೦,೦೦೦ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

[pj-news-ticker]