ಕೋಪನ್ಹೇಗನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ಲ್ಯಾಂಡನ್ನು “ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ” ಸ್ವಾಧೀನ ಪಡಿಸಿಕೊಳ್ಳುವುದಾಗಿ ಹೇಳಿದ ಕೆಲವು ದಿನಗಳ ನಂತರ ಡೆನ್ಮಾರ್ಕ್ನ ರಕ್ಷಣಾ ಸಚಿವಾಲಯವು ಅಮೆರಿಕದ ವಿರುದ್ಧ ಗುಡುಗಿದೆ. ಒಂದು ವೇಳೆ ಅಮೆರಿಕವು ದ್ವೀಪವನ್ನು ಆಕ್ರಮಿಸಿದರೆ ತನ್ನ ಸೈನಿಕರು ಮೊದಲು ಗುಂಡು ಹಾರಿಸಿ ನಂತರ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಹೇಳಿದೆ.
ಡ್ಯಾನಿಸ್ ರಕ್ಷಣಾ ಸಚಿವಾಲಯವು ಮಿಲಿಟರಿ ಸನ್ನದ್ಧತೆಯ ಕುರಿತಾದ ಸ್ಥಾಯಿ ಆದೇಶಗಳು ಜಾರಿಯಲ್ಲಿವೆ ಎಂದು ಸ್ಪಷ್ಟಪಡಿಸಿದೆ. ಈ ಆದೇಶಗಳು ದೇಶದ ಮೇಲಿನ ದಾಳಿಗಳ ಸಮಯದಲ್ಲಿ ಅಥವಾ ಯುದ್ಧಕಾಲದಲ್ಲಿ ಅನ್ವಯಿಸುತ್ತವೆ.
“ದೇಶದ ಮೇಲೆ ದಾಳಿಗಳು ಮತ್ತು ಯುದ್ಧದ ಸಮಯದಲ್ಲಿ ಮಿಲಿಟರಿ ರಕ್ಷಣೆಗಾಗಿ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಆದೇಶವು ಜಾರಿಯಲ್ಲಿದೆ” ಎಂದು ಸಚಿವಾಲಯ ತಿಳಿಸಿದೆ.
ನ್ಯೂಯಾರ್ಕ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ನ್ಯಾಟೋ, ಗ್ರೀನ್ಲ್ಯಾಂಡ್ ಮತ್ತು ಜಾಗತಿಕ ಶಕ್ತಿಯ ಬಗ್ಗೆ ಚರ್ಚಿಸುವಾಗ ಅಂತಾರಾಷ್ಟ್ರೀಯ ಕಾನೂನನ್ನು ತಳ್ಳಿಹಾಕಿದಂತೆ ಕಂಡುಬಂದ ನಂತರ ಈ ಹೇಳಿಕೆಗಳು ಬಂದಿವೆ. ಅವರ ಅಧಿಕಾರಕ್ಕೆ ಯಾವುದೇ ಮಿತಿಗಳಿವೆಯೇ ಎಂದು ಕೇಳಿದಾಗ, ಟ್ರಂಪ್ ಅವರ ಸ್ವಂತ ನಿರ್ಧಾರ ಮಾತ್ರ ಅವರನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ತಮ್ಮ ಆಡಳಿತವು ಅಂತಾರಾಷ್ಟ್ರೀಯ ಕಾನೂನನ್ನು ಅನುಸರಿಸಬೇಕೇ ಅಥವಾ ಬೇಡವೇ ಎಂದು ಒತ್ತಾಯಿಸಿದಾಗ, ಟ್ರಂಪ್ “ನನಗೆ ಗೊತ್ತು” ಎಂದು ಹೇಳಿದರು. ಅಂತಹ ನಿಯಮಗಳು ಅಮೆರಿಕಕ್ಕೆ ಯಾವಾಗ ಅನ್ವಯಿಸುತ್ತವೆ ಎಂಬುದನ್ನು ತಾನು ಸ್ವತಃ ನಿರ್ಧರಿಸುವುದಾಗಿ ಟ್ರಂಪ್ ಸೂಚಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರೀನ್ಲ್ಯಾಂಡ್ ದೇಶವು ತನ್ನದೇ ಆದ ಸೇನೆಯನ್ನು ಹೊಂದಿಲ್ಲ. ಡೆನ್ಮಾರ್ಕ್ ಈ ದ್ವೀಪ ದೇಶದಲ್ಲಿ ಸೀಮಿತ ಮಿಲಿಟರಿ ಉಪಸ್ಥಿತಿಯನ್ನು ಮಾತ್ರ ಹೊಂದಿದೆ. ಒಂದು ವೇಳೆ ಅಮೆರಿಕವು ಗ್ರೀನ್ಲ್ಯಾಂಡ್ ಮೇಲೆ ದಾಳಿ ಮಾಡಿದರೆ ಅದು ನ್ಯಾಟೋದ ಆರ್ಟಿಕಲ್ 5 ನ್ನು ಪ್ರಚೋದಿಸಲಿದೆ. ಇದರ ಪ್ರಕಾರ ನ್ಯಾಟೋದ ಯಾವುದೇ ದೇಶದ ಮೇಲಿನ ದಾಳಿಯು ಎಲ್ಲಾ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲ್ಪಡುತ್ತದೆ.
ಗ್ರೀನ್ಲ್ಯಾಂಡ್ನ ಆಕ್ರಮಣವು “ನ್ಯಾಟೋ ಅಂತ್ಯ” ವನ್ನು ಸೂಚಿಸುತ್ತದೆ, ಯುದ್ಧಾನಂತರದ ಜಾಗತಿಕ ಕ್ರಮವನ್ನು ಹಾಳು ಮಾಡುತ್ತದೆ ಎಂದು ಡ್ಯಾನಿಶ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಎಚ್ಚರಿಸಿದ್ದಾರೆ.
