ಹಾಸನ: ತಂದೆಯ ಅಂತ್ಯ ಸಂಸ್ಕಾರಕ್ಕೆ ಮಗ ಬಾರದ ಹಿನ್ನೆಲೆ ಹುಡುಕಾಟ ನಡೆಸಿದಾಗ ಮಗನ ಕೊಲೆ ಪ್ರಕರಣ ಬೆಳಕಿಗೆ ಬಂದಿರುವ ಘಟನೆ ಜಿಲ್ಲೆಯ ಆಲೂರು ತಾಲೂಕಿನ ಸಂತಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಣದ ವಿವಾದದಲ್ಲಿ ತಂದೆಯೇ ಮಗನನ್ನು ಕೊಂದು, ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತು ಮರೆಮಾಚಿದ ಆಘಾತಕಾರಿ ಘಟನೆ ಎರಡು ವರ್ಷಗಳ ನಂತರ ಬೆಳಕಿಗೆ ಬಂದಿದೆ. ರಘು (32) ಕೊಲೆಯಾದ ವ್ಯಕ್ತಿ. ಈತ ತನ್ನ ತಂದೆ ಅಂದರೆ ಈಗ ಮೃತಪಟ್ಟಿರುವ ಗಂಗಾಧರ್ ಅವರಿಂದ 2 ವರ್ಷದ ಹಿಂದೆ ಹತ್ಯೆಗೀಡಾದ ವಿಚಾರ ಈಗ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಸಂತಬಸವನಹಳ್ಳಿ ಗ್ರಾಮದಲ್ಲಿ ಹತ್ತು ದಿನಗಳ ಹಿಂದೆ ಗಂಗಾಧರ್ ಎಂಬ ವ್ಯಕ್ತಿ ಆ.1ರಂದು ಮೃತಪಟ್ಟಿದ್ದರು. ಈ ವೇಳೆ ಮಗ ರಘು ತಂದೆಯ ಅಂತ್ಯ ಸಂಸ್ಕಾರಕ್ಕೆ ಬಂದಿರಲಿಲ್ಲ. ಬಳಿಕ ಮೂರನೇ ದಿನದ ಹಾಲುತುಪ್ಪದ ಕಾರ್ಯಕ್ಕೂ ಬಂದಿರಲಿಲ್ಲ. ಆ.11ರಂದು ತಂದೆಯ ವೈಕುಂಠ ಸಮಾರಾಧನೆಗೂ ಬಾರದೇ ಇದ್ದುದರಿಂದ ಸಂಬಂಧಿಕರಿಗೆ ಅನುಮಾನ ಮೂಡಿತ್ತು.
ಮಗನನ್ನು ಕರೆಯಿಸಿ ಎಂದು ಆಗ್ರಹ ಮಾಡಿದಾಗ, ಅಣ್ಣ ಕಾರ್ಯಕ್ಕೆ ಬರುವುದಿಲ್ಲ ಎಂದು ಮೃತನ ಬುದ್ಧಿಮಾಂದ್ಯ ಸಹೋದರ ರೂಪೇಶ್ ಮರೆಮಾಚಿದ್ದ. ಇದಾಗಿ 11ನೇ ದಿನದ ಹಾಲುತುಪ್ಪದ ಕಾರ್ಯ ಇದ್ದು ಇದಕ್ಕೂ ಬಾರದ ಹಿನ್ನೆಲೆ ಮೃತ ಗಂಗಾಧರನ ಇನ್ನೊಬ್ಬ ಮಗ (ಬುದ್ಧಿಮಾಂದ್ಯ) ರೂಪೇಶ್ಗೆ ಫೋನ್ ಮಾಡಿ ರಘುವನ್ನು ಬರಲು ಹೇಳುವಂತೆ ಒತ್ತಡ ಹೇರಿದಾಗ, ಈ ರೂಪೇಶ್ ಕೊಲೆಯ ರಹಸ್ಯವನ್ನು ಬಾಯ್ಬಿಟ್ಟಿದ್ದಾನೆ.
ಮಗನನ್ನೇ ಕೊಂದಿದ್ದ ತಂದೆ: ರೂಪೇಶ್ ಕೊಲೆಯ ಬಗ್ಗೆ ಹೇಳಿದ ತಕ್ಷಣ ಸಂಬಂಧಿಕರು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದು, ಕೊಲೆ ರಹಸ್ಯದ ಉತ್ಖನವನ್ನು ತಾಲೂಕು ಆಡಳಿತ ಮಾಡಿದೆ. ಈ ವೇಳೆ ಮೃತ ರಘುವಿನ ಅಸ್ಥಿಪಂಜರ ದೊರಕಿದೆ.
ಐಪಿಎಲ್ ಬೆಟ್ಟಿಂಗ್ನಿಂದ ಸಾಲ: ಮೃತಪಟ್ಟಿರುವ ಗಂಗಾಧರನ ಪುತ್ರ ರಘು (32) ಬಿಎಂಟಿಸಿಯಲ್ಲಿ ನೌಕರನಾಗಿದ್ದ. ಕ್ರಿಕೆಟ್ ಬೆಟ್ಟಿಂಗ್, ಇಸ್ಪೀಟ್ ಆಟದಿಂದ ಲಕ್ಷಾಂತರ ರೂ. ಹಣವನ್ನು ಕಳೆದುಕೊಂಡಿದ್ದ. ಬಳಿಕ ಕೆಲ ಕಾರಣಕ್ಕೆ ಕೆಲಸ ಕಳೆದುಕೊಂಡ ರಘು ಸ್ವಗ್ರಾಮಕ್ಕೆ ಬಂದು ವಾಸವಾಗಿದ್ದ. ಸಾಲ ತೀರಿಸಲು ರಘು ಹಣಕ್ಕಾಗಿ ತಂದೆಗೆ ಹಿಂಸೆ ಮಾಡುತ್ತಿದ್ದ ಎನ್ನಲಾಗಿದೆ.
ಇಂಗು ಗುಂಡಿಯಲ್ಲಿ ಅಸ್ಥಿಪಂಜರ ಪತ್ತೆ: ಹಣದ ವಿಷಯಕ್ಕೆ ನಡೆದ ಜಗಳಕ್ಕೆ ತಾರಕಕ್ಕೇರಿದೆ. ಈ ಮಧ್ಯೆ ವಿವಾದದಲ್ಲಿ ಗಂಗಾಧರ ತನ್ನ ಮಗನನ್ನು ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ, ಮತ್ತೊಬ್ಬ ಮಗ ರೂಪೇಶ್ ಜೊತೆ ಸೇರಿ ರಘುವಿನ ಶವವನ್ನು ಮನೆಯ ಹಿಂಭಾಗದ ಇಂಗು ಗುಂಡಿಯಲ್ಲಿ ಹೂತುಹಾಕಿ ಮರೆಮಾಚಿದ್ದರು.
ಕೊಲೆಯ ರಹಸ್ಯವನ್ನು ಎಲ್ಲಿಯಾದರೂ ಬಾಯ್ಬಿಟ್ಟರೆ ನಿನ್ನನ್ನು ಕೊಲೆ ಮಾಡುವುದಾಗಿ ಆರೋಪಿ ಗಂಗಾಧರನು ರೂಪೇಶಗೆ ಬೆದರಿಕೆ ಹಾಕಿದ್ದ ಎಂದು ಕೊಲೆಯಾದ ರಘು ಸೋದರಮಾವ ಪಾಲಾಕ್ಷ ಅವರು ಆಲೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹೀಗಾಗಿ ರೂಪೇಶ್ ಈ ವಿಚಾರವನ್ನು ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ.
ದೂರಿನ ಹಿನ್ನೆಲೆಯಲ್ಲಿ ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಇಂಗು ಗುಂಡಿಯಿಂದ ರಘುವಿನ ದೇಹದ ಮೂಳೆಗಳನ್ನು ಹೊರತೆಗೆದಿದ್ದಾರೆ. ಈ ಮೂಳೆಗಳನ್ನು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮತ್ತು ಆಘಾತವನ್ನುಂಟು ಮಾಡಿದ್ದು, ಕೊಲೆಯ ಮತ್ತಷ್ಟು ರಹಸ್ಯವನ್ನು ಭೇದಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
