ಶಿವಮೊಗ್ಗ: ಟ್ರೇಡಿಂಗ್ನಲ್ಲಿ ಲಾಭವಿದೆ ಎಂದು ನಂಬಿಸಿ ಸೈಬರ್ ವಂಚಕರು ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 4.90 ಲಕ್ಷ ರೂ. ಹಣವನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ (Cyber, Economic & Narcotics) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಂಚಕರು ಮೊದಲು ತಮ್ಮನ್ನು ಹರ್ನಿಶ್ ಮಹೇಶ್ ಶುಕ್ಲಾ ಎಂದು ಪರಿಚಯಿಸಿಕೊಂಡು, ‘Indiaboltplus’ ಹಾಗೂ ‘BR JALAN SECURITIES’ ಕಂಪನಿಗಳ ಹೆಸರನ್ನು ಬಳಸಿಕೊಂಡು ದೂರುದಾರರ ನಂಬಿಕೆ ಗಳಿಸಿದ್ದರು. ಪ್ರತಿದಿನ ಮಧ್ಯಾಹ್ನ ಮತ್ತು ಸಂಜೆ ನಿಗದಿತ ಸಮಯದಲ್ಲಿ ವಾಟ್ಸಾಪ್ ಗುಂಪುಗಳ ಮೂಲಕ ಟ್ರೇಡಿಂಗ್ ತರಬೇತಿ ನೀಡುತ್ತಿರುವಂತೆ ನಾಟಕವಾಡಿ, ಹೂಡಿಕೆ ಮಾಡಲು ಪ್ರೇರೇಪಿಸಿದ್ದರು.
ಇದನ್ನು ನಿಜವೆಂದು ನಂಬಿದ ಸಂತ್ರಸ್ತರು, ವಂಚಕರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ NEFT ಮತ್ತು RTGS ಮೂಲಕ ಒಟ್ಟು 4,90,000 ರೂ. ವರ್ಗಾವಣೆ ಮಾಡಿದ್ದಾರೆ.
ಹಣ ಹೂಡಿಕೆಯ ನಂತರ ಅದನ್ನು ಹಿಂಪಡೆಯಲು ಯತ್ನಿಸಿದಾಗ ವಂಚನೆಯ ಅಸಲಿ ಬಣ್ಣ ಬಯಲಾಗಿದೆ. ಹಣವು ಸೆಬಿ ನಿಯಂತ್ರಣದಲ್ಲಿದೆ, ಟ್ಯಾಕ್ಸ್ ಪಾವತಿಸಬೇಕು, ಆರ್.ಡಿ ಖಾತೆಯಲ್ಲಿ ಇದೆ, ಬ್ರೋಕರ್ ಚಾರ್ಜ್ ಪಾವತಿಸಬೇಕು ಎಂಬಂತೆ ಒಂದೊಂದೇ ನೆಪ ಹೇಳಿ ಹಣ ನೀಡದೇ ಸತಾಯಿಸಿದ್ದಾರೆ.
ಕೊನೆಗೆ ಹಣ ವಿತ್ಡ್ರಾ ಮಾಡಲು ಸಾಧ್ಯವಾಗದೇ, ಪರಿಚಿತರಲ್ಲಿ ವಿಚಾರಿಸಿದಾಗ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಸಂತ್ರಸ್ತರಿಗೆ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
