Trending

ಇಂಡಿಗೋ ವಿಮಾನ ರದ್ದು: ವಧು-ವರರಿಲ್ಲದೇ ಹುಬ್ಬಳ್ಳಿಯಲ್ಲಿ ನಡೀತು ಆರತಕ್ಷತೆ : ಆನ್​ಲೈನ್​ನಲ್ಲೇ ಆಶೀರ್ವಾದ ಪಡೆದ ನವದಂಪತಿ

Spread the love

ಹುಬ್ಬಳ್ಳಿ: ಕಾರ್ಯಾಚರಣೆ ಸಮಸ್ಯೆಗಳಿಂದಾಗಿ ದೇಶಾದ್ಯಂತ ನೂರಾರು ವಿಮಾನಗಳ ಹಾರಾಟವನ್ನು ಇಂಡಿಗೋ ಏರ್‌ಲೈನ್ಸ್​ ರದ್ದುಗೊಳಿಸಿದ್ದು, ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ವಧು-ವರರ ಆರತಕ್ಷತೆಗೆ ಮದುಮಕ್ಕಳು ಬರಲಾಗದೇ, ಆನ್‌ಲೈನ್ ಮೂಲಕವೇ ಆರತಕ್ಷತೆ ಮುಗಿಸಿದ ಪ್ರಸಂಗ ನಡೆದಿದೆ.

ಮಗಳು-ಅಳಿಯನ ಬದಲು ವಧುವಿನ ತಂದೆ – ತಾಯಿಯೇ ಕುಳಿತು ಆರತಕ್ಷತೆ ಸಂಪ್ರದಾಯ, ಶಾಸ್ತ್ರ ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್​ ಎಂಜಿನಿಯರ್‌ಗಳಾಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಒಡಿಶಾದ ಭುವನೇಶ್ವರದ ಸಂಗ್ರಾಮ್ ದಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರು ಒಪ್ಪಿ ಇಬ್ಬರ ಮದುವೆಯನ್ನು ಭುವನೇಶ್ವರದಲ್ಲಿ ನ.23ರಂದು ನೆರವೇರಿಸಿದ್ದರು.

ವಧುವಿನ ತವರು ಹುಬ್ಬಳ್ಳಿಯಲ್ಲಿ ಡಿ.3ರಂದು ಆರತಕ್ಷತೆ ಆಯೋಜಿಸಲಾಗಿತ್ತು. ಇದಕ್ಕಾಗಿ ಹುಬ್ಬಳ್ಳಿಯ ಗುಜರಾತ್‌ ಭವನದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಧು ಹಾಗೂ ವರನ ಸಂಬಂಧಿಕರೂ ಬಂದಿದ್ದರು. ವಧು – ವರರು ಭುವನೇಶ್ವರದಿಂದ ಬೆಂಗಳೂರಿಗೆ, ಅಲ್ಲಿಂದ ಹುಬ್ಬಳ್ಳಿಗೆ ಡಿ.2ಕ್ಕೆ ವಿಮಾನ ಬುಕ್‌ ಮಾಡಿದ್ದರು. ಕೆಲ ಸಂಬಂಧಿಕರಿಗೆ ಭುವನೇಶ್ವರದಿಂದ ಮುಂಬೈ, ಅಲ್ಲಿಂದ ಹುಬ್ಬಳ್ಳಿಗೆ – ವಿಮಾನದ ಟಿಕೆಟ್ ಬುಕ್ ಆಗಿತ್ತು.

ಆದರೆ, ಡಿ.2ರ ಬೆಳಗ್ಗೆ 9ರಿಂದ ಮರುದಿನ (ಡಿ.3) ಬೆಳಗಿನ ಜಾವ 4-5ರವರೆಗೂ ವಿಮಾನ ವಿಳಂಬವಾಗುತ್ತಿದೆ ಎಂದು ಹೇಳಿಕೊಂಡೇ ಬಂದಿದ್ದ ಇಂಡಿಗೋ ಸಿಬ್ಬಂದಿ, ಡಿ.3ರ ಬೆಳಗ್ಗೆ ವಿಮಾನ ರದ್ದಾಗಿದೆ ಎಂದಿದ್ದರು. ಹೀಗಾಗಿ, ಬರಲು ಯಾವುದೇ ಅನ್ಯಮಾರ್ಗ ತಿಳಿಯದೇ ವಧು-ವರ, ಮತ್ತು ವರನ ಪಾಲಕರೆಲ್ಲರೂ ಭುವನೇಶ್ವರದಲ್ಲಿಯೇ ಉಳಿಯುವಂತಾಯಿತೆಂದು ವಧುವಿನ ತಂದೆ ಅನಿಲ್ ಕಮಾರ್ ಕ್ಷೀರಸಾಗರ ಹೇಳಿದ್ದಾರೆ.

ಇಂಡಿಗೋ ಸಂಸ್ಥೆಯವರು ಒಂದೆರಡು ದಿನ ಮೊದಲೇ ವಿಮಾನ ರದ್ದಾಗಿರುವುದನ್ನು ತಿಳಿಸಿದ್ದರೆ ಬೇರೆ ವ್ಯವಸ್ಥೆ ಮೂಲಕವಾದರೂ ಬಂದು ಆರತಕ್ಷತೆಯಲ್ಲಿ ಪಾಲ್ಗೊಳ್ಳಬಹುದಿತ್ತು. ಆದರೆ, ಕೊನೆಯವರೆಗೂ ವಿಮಾನ ಈಗ ಹೊರಡಲಿದೆ, ಆಗ ಹೊರಡುತ್ತದೆ ಎಂದು ಕಾಲಹರಣ ಮಾಡುತ್ತಲೇ ಸಾಗಿದ್ದರಿಂದ ಹಾಗೂ ಸರಿಯಾಗಿ ಮಾಹಿತಿ ನೀಡದೇ ಇದ್ದುದರಿಂದ ವಧು-ವರರಿಲ್ಲದೇ ಆರತಕ್ಷತೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

[pj-news-ticker]