ಶಿವಮೊಗ್ಗ: ಜಿಎಸ್ಟಿ ಕಡಿತದಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಜಿಎಸ್ಟಿಯ ಎರಡು ಹಂತದಲ್ಲಿನ ಕಡಿತದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಜನರು, ವ್ಯಾಪಾರಿಗಳಿಗೆ ಅವರು ಸಿಹಿ ಹಂಚಿದರು.
ನಂತರ ಗಾಂಧಿ ಬಜಾರ್ನ ಅಂಗಡಿಗಳಿಗೆ ತೆರಳಿ, ಸಿಹಿ ಹಂಚುವ ಜೊತೆಗೆ ಜಿಎಸ್ಟಿ ಕಡಿತದ ಬಗ್ಗೆ ತಿಳಿಸಿಕೊಟ್ಟರು.
ನಂತರ ಮಾತನಾಡಿದ ವಿಜಯೇಂದ್ರ, ದೇಶದಲ್ಲಿ ಇಂದಿನಿಂದ ಜಿಎಸ್ಟಿ ಸುಧಾರಣೆಯ ಅನುಷ್ಟಾನ ಆಗುತ್ತಿದೆ. ಇಂದು ಐತಿಹಾಸಿಕ ದಿನ. ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಜಿಎಸ್ಟಿ ಸುಧಾರಣೆಯ ಬಗ್ಗೆ ಜನರಿಗೆ ಹಾಗೂ ವ್ಯಾಪಾರಿಗಳಿಗೆ ತಿಳಿಸಿದ್ದೇವೆ. 2047ನೇ ಇಸವಿಗೆ ವಿಕಸಿತ ಭಾರತ ಪರಿವರ್ತನೆ ಆಗಬೇಕೆಂಬ ಮೋದಿಜಿ ಅವರ ಕನಸಿಗೆ ಜಿಎಸ್ಟಿ ಸುಧಾರಣೆ ಸಾಕಷ್ಟು ಸಹಾಯ ಮಾಡಲಿದೆ ಎಂದು ತಿಳಿಸಿದರು.
ಜಾತಿ ಸಮೀಕ್ಷೆ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯದವರಿಗೆ ಜಾತಿ ಕಲಂ ಕುರಿತು ಉಂಟಾಗಿರುವ ಗೊಂದಲದ ಕುರಿತು ಪ್ರತಿಕ್ರಿಯಿಸಿ, ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಕುರಿತು ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸುವೆ ಎಂದರು.
ಶರಾವತಿ ಪಂಪ್ ಸ್ಟೋರೇಜ್ ಕುರಿತು ಶೀಘ್ರ ತೀರ್ಮಾನ: ಶರಾವತಿ ಪಂಪ್ ಸ್ಟೋರೇಜ್ ಕುರಿತು ನಮ್ಮ ಜಿಲ್ಲೆಯ ಸಂಸದರು, ನಮ್ಮ ಶಾಸಕರುಗಳ ಜೊತೆ ಚರ್ಚೆ ನಡೆಸಿ, ಇದರ ಬಗ್ಗೆ ನಮ್ಮ ನಿಲುವೇನು ಎಂಬುದರ ಬಗ್ಗೆ ತಿಳಿಸುತ್ತೇವೆ ಎಂದರು.
