ಗುಂಡ್ಲುಪೇಟೆ : ಅರಣ್ಯ ಇಲಾಖೆಯ ಅಧಿಕಾರಿಗಳು ಹುಲಿ ಸೆರೆ ಹಿಡಿಯಲು ವಿಫಲರಾಗಿದ್ದಾರೆ ಎಂದು ಸಿಟ್ಟಿಗೆದ್ದ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ರೈತರು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ಬೋನಿನೊಳಗೆ ಕೂಡಿ ಹಾಕಿ ದಿಗ್ಬಂಧನ ವಿಧಿಸಿದ ಪ್ರಸಂಗ ಮಂಗಳವಾರ ನಡೆದಿದೆ.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಹುಲಿಗಳ ಉಪಟಳ ಹೆಚ್ಚಾಗಿದ್ದು ಸೆರೆ ಹಿಡಿಯಲು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನೇ ಬೋನಿನೊಳಗೆ ಕೂಡಿ ಹಾಕಿದ್ದೇವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೊಮ್ಮಲಾಪುರ ಗ್ರಾಮದ ರೈತ ಗಂಗಪ್ಪನವರ ಜಮೀನಿನ ಸುತ್ತಮುತ್ತ ಹುಲಿ ಹಾಗೂ ಚಿರತೆಗಳ ಉಪಟಳ ಹೆಚ್ಚಾಗಿದ್ದು ಜಾನುವಾರು ಮೇಲೆ ದಾಳಿ ಮಾಡಿ ಕೊಂದು ಹಾಕಿವೆ. ರೈತರ ಒತ್ತಾಯಕ್ಕೆ ಮಣಿದು ಹುಲಿ ಸೆರೆಗೆ ನೆಪಕ್ಕೆ ಬೋನು ಇರಿಸಿರುವ ಅಧಿಕಾರಿಗಳು ಇತ್ತ ಸುಳಿದಿಲ್ಲ. ಮೂರು ದಿನಗಳ ಹಿಂದೆ ಹುಲಿ ದಾಳಿಗೆ ಕರುವೊಂದು ಸತ್ತರೂ ಸ್ಥಳಕ್ಕೆ ಬಂದಿರಲಿಲ್ಲ.
ಹಾಗಾಗಿ, ಬೊಮ್ಮಲಾಪುರ ಗ್ರಾಮಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಬೋನಿನೊಳಗೆ ಕೂಡಿಹಾಕಬೇಕಾಯಿತು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
