ಲಖನೌ: ಮದುವೆ ಆಗಿ ಮಕ್ಕಳಿರುವ ಮಹಿಳೆಯರು ಪ್ರಿಯಕರನೊಂದಿಗೆ ಓಡಿ ಹೋಗುವ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆಯಾಗಿ ಈ ಘಟನೆ ಸೇರ್ಪಡೆಯಾಗಿದೆ. ಆದರೆ ಈಲ್ಲೊಂದು ಟ್ವಿಸ್ಟ್ ಇದೆ. ಪ್ರಿಯಕರನೊಂದಿಗೆ ಸಂಬಂಧ ಮುಂದುವರಿಸಿದ್ದ ಪತ್ನಿಯ ವರ್ತನೆಯಿಂದ ಬೇಸೆತ್ತ ಪತಿ ಆಕೆಯನ್ನು ಆತನಿಗೇ ಕೊಟ್ಟು ಮದುವೆ ಮಾಡಿಸಿದ್ದಾನೆ.
ಉತ್ತರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಉತ್ತರ ಪ್ರದೇಶದ ಜಾನ್ಪುರದಲ್ಲಿ ಈ ಘಟನೆ ನಡೆದಿದೆ. ಇದು ಜನರನ್ನು ಅಚ್ಚರಿಗೆ ದೂಡಿದ್ದು ಮಾತ್ರವಲ್ಲ ಸಂಬಂಧ, ಪ್ರೀತಿ, ಮದುವೆ ಮತ್ತು ತ್ಯಾಗಕ್ಕೆ ಹೊಸ ಭಾಷ್ಯ ಬರೆದಿದೆ. ಜಿಲ್ಲೆಯ ಸೂಥಕಲಾ ಬ್ಲಾಕ್ನ ಮೊಹಿಯುದ್ದೀನ್ಪುರ ಮಾರ್ಕೆಟ್ನಲ್ಲಿ ಈ ಅಪರೂಪದ ಪ್ರಸಂಗ ನಡೆದಿರುವುದಾಗಿ ವರದಿಯೊಂದು ತಿಳಿಸಿದೆ. ಪತ್ನಿಯ ಲವ್ಸ್ಟೋರಿ ತಿಳಿದ ಪತಿ ಆಕೆಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸಿ ಕೈ ತೊಳೆದುಕೊಂಡಿದ್ದಾನೆ. ಪತಿಯ ಈ ನಡೆಯನ್ನು ʼʼಅಪರೂಪದ ತ್ಯಾಗʼʼ ಎಂದು ಸ್ಥಳೀಯರು ಬಣ್ಣಿಸಿದ್ದಾರೆ.
ಘಟನೆ ವಿವರ
ಸರೈ ಮೊಹಿಯುದ್ದೀನ್ಪುರದ ನಿವಾಸಿ ಅರವಿಂದ್ ಬಿಂದ್ 2 ವರ್ಷಗಳ ಹಿಂದೆ ಖೇತಸರೈ ನಿವಾಸಿ ರೀಟಾ ಎಂಬಾಕೆಯನ್ನು ವಿವಾಹವಾಗಿದ್ದ. ಮದುವೆಯಾದ ಕೆಲವು ದಿನಗಳ ಕಾಲ ಎಲ್ಲವೂ ಸರಿ ಇತ್ತು. ಆದರೆ ತಿಂಗಳ ಬಳಿಕ ಅರವಿಂದ್ಗೆ ಪತ್ನಿಯ ವರ್ತನೆಯಲ್ಲಿನ ಬದಲಾವಣೆ ಗಮನಕ್ಕೆ ಬಂತು. ವಿಚಾರಿಸಿದಾಗ ಆತನಿಗೆ ಪತ್ನಿಯ ಲವ್ ಅಫೇರ್ ಬಗ್ಗೆ ತಿಳಿಯಿತು. ಮದುವೆಗೆ ಮೊದಲೇ ಯಶವಂತ್ ಬಿಂದ್ ಜತೆಗೆ ಸಂಬಂಧ ಹೊಂದಿದ್ದ ಆಕೆ ಬಳಿಕವೂ ಇದನ್ನು ಮುಂದುವರಿಸಿದ್ದಳು.
ಅದಾದ ಬಳಿಕ ರೀಟಾ ತನ್ನ ಪ್ರಿಯಕರ ಯಶವಂತ್ ಜತೆಗೆ ಮನೆ ಬಿಟ್ಟು ಓಡಿ ಹೋದಳು. ಹೇಗೊ ಹುಡುಕಿ ಅರವಿಂದ್ ಆಕೆಯನ್ನು ಮನೆಗೆ ಕರೆ ತಂದ. ಆದರೆ ಆಕೆ ತನ್ನ ಕಿರಿಕ್ ಮುಂದುವರಿಸಿದಳು. ಅತ್ತೆ-ಮಾವನೊಂದಿಗೆ ವಾಸಿಸಲು ನಿರಾಕರಿಸುವ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಒಡ್ಡಿದಳು. ಹೀಗಾಗಿ ಅರವಿಂದ್ ಆಕೆಯನ್ನು ಕರೆದುಕೊಂಡು ನೋಯ್ಡಾಕ್ಕೆ ತೆರಳಿದ.
ನಾಯಿ ಬಾಲ ಎಂದಿಗೂ ಡೊಂಕೇ ಎನ್ನುವ ಮಾತಿನಂತೆ ನೋಯ್ಡಾಕ್ಕೆ ಬಂದರೂ ರೀಟಾ ತನ್ನ ವರ್ತನೆಯನ್ನು ಬದಲಾಯಿಸಲಿಲ್ಲ. ಅರವಿಂದ್ ಕೆಲಸಕ್ಕೆ ತೆರಳುತ್ತಿದ್ದಂತೆ ಪ್ರಿಯಕರನೊಂದಿಗೆ ಗಂಟೆಗಟ್ಟಲೆ ಸಂಭಾಷಣೆಯಲ್ಲಿ ತೊಡಗಿರುತ್ತಿದ್ದಳು. ಆತನೊಂದಿಗೆ ಸಂಬಂಧ ಮುಂದುವರಿಸಿದ್ದಳು. ಬಹಳಷ್ಟು ಬಾರಿ ಬುದ್ಧಿ ಹೇಳಿದರೂ ಆಕೆ ಬದಲಾಗಲಿಲ್ಲ. ಕೊನೆಗೆ ಅರವಿಂದ್ ಆಕೆಯನ್ನು ಪ್ರಿಯಕರನೊಂದಿಗೆ ಮದುವೆ ಮಾಡಿಸುವ ನಿರ್ಧಾರಕ್ಕೆ ಬಂದ.
ಜಾನ್ಪುರಕ್ಕೆ ಪತ್ನಿಯನ್ನು ಕರೆತಂದ ಅರವಿಂದ್ ಅಲ್ಲಿನ ದುರ್ಗಾ ದೇವಸ್ಥಾನದಲ್ಲಿ ಯಶವಂತ್ ಜತೆಗೆ ಆಕೆಯ ಮದುವೆ ನೆರವೇರಿಸಿದ್ದಾನೆ. ಸಂಪ್ರದಾಯಬದ್ದವಾಗಿ ವಿವಾಹ ಶಾಸ್ತ್ರ ನೆರವೇರಿದೆ. ಕೊನೆಗೆ ಅರವಿಂದ್ ಭಾವುಕನಾಗಿ ವಧು-ವರರನ್ನು ಅಶೀರ್ವದಿಸಿ ಬೀಳ್ಕೊಟ್ಟಿದ್ದಾನೆ. ಸದ್ಯ ಈ ಅಪರೂಪದ ಮದುವೆ ಪ್ರಸಂಗ ದೇಶದ ಗಮನ ಸೆಳೆದಿದೆ.
