Trending

ಕಾಂತಾರ ದಿ‌ ಲೆಜೆಂಡ್ ಭಾಗ-1 ಚಿತ್ರೀಕರಣ : ನೋಟಿಸ್​​ಗೆ ಹೊಂಬಾಳೆ ತಂಡ ನೀಡಿದ ಉತ್ತರ ಹೀಗಿದೆ

Spread the love

ಶಿವಮೊಗ್ಗ: ಕಾಂತಾರ ದಿ‌ ಲೆಜೆಂಡ್ ಭಾಗ-1 ಚಿತ್ರೀಕರಣದ ಸೆಟ್​​ನಲ್ಲಿ ಬೋಟ್ ಮಗುಚಿದ ಎಂಬ ವರದಿ ಬಗ್ಗೆ ಹೊಸನಗರ ತಾಲೂಕಾಡಳಿತ ಜೂನ್ 16 ರಂದು ನೀಡಿದ್ದ ನೋಟಿಸ್​ಗೆ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ತಂಡ ಉತ್ತರ ನೀಡಿದೆ.

ನೋಟಿಸ್ ಪಡೆದ ನಂತರ ಕಾಲಾವಕಾಶ ಪಡೆದ ಹೊಂಬಾಳೆ‌ ತಂಡ, ಬುಧವಾರ ಸಂಜೆ ಹೊಸನಗರ ತಹಶೀಲ್ದಾರ್ ಕಚೇರಿಗೆ ತಮ್ಮ ಸ್ಪಷ್ಟ ಉತ್ತರದ ಜೊತೆಗೆ ತಾವು ಚಿತ್ರೀಕರಣಕ್ಕಾಗಿ ಯಾರ ಬಳಿ ಅನುಮತಿ ಪಡೆದಿದ್ದೇವೆ ಎಂಬುದರ ದಾಖಲೆಯನ್ನು ನೀಡಿದೆ.

ಚಿತ್ರ ತಂಡದ ಸ್ಪಷ್ಟೀಕರಣ ಹೀಗಿದೆ: ನೋಟಿಸ್​ಗೆ ಉತ್ತರ ನೀಡಿರುವ ಚಿತ್ರತಂಡ, ಚಿತ್ರೀಕರಣಕ್ಕಾಗಿ ಯಾವ ಯಾವ ಇಲಾಖೆಯಿಂದ ಅನುಮತಿ ಪಡೆದಿದ್ದೇವೆ ಎಂಬುದನ್ನು ತಿಳಿಸಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಿಂದ ಏಕಗವಾಕ್ಷಿ ಅನುಮತಿ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರು ನೀಡಿದ ಡ್ರೋನ್ ಹಾಗೂ ಭದ್ರತಾ ಅನುಮತಿ, ಅರಣ್ಯ ಹಾಗೂ ಪರಿಸರ ಇಲಾಖೆಯ ಪತ್ರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅನುಮತಿ ಪತ್ರ, ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ ಅನುಮತಿ ಪತ್ರ, ಸಾಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಪತ್ರದೊಂದಿಗೆ ಚಿತ್ರತಂಡ ಸ್ಪಷ್ಟೀಕರಣ ನೀಡಿದೆ.

ಅಂದು ಆಗಿದ್ದೇನು?: ದೃಶ್ಯಪಟದ ಹಿನ್ನೆಲೆಗಾಗಿ ಮಾತ್ರ ಹಾಕಿದ್ದ ಹಡಗಿನ ರೂಪದ ವಿನ್ಯಾಸಾತ್ಮಕ ರಚನೆಯು ಹವಾಮಾನ ಬದಲಾವಣೆಯಿಂದ ಗಾಳಿ ಮಳೆಗೆ ಜೂನ್ 14 ರಂದು ಬಿದ್ದಿದೆ. ಹಡಗಿನ ರೂಪದ ವಿನ್ಯಾಸಾತ್ಮಕ ರಚನೆ ಬಿದ್ದ ಜಾಗಕ್ಕೂ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೂ ದೂರವಿದೆ. ಈ ಘಟನೆ ನಡೆದಾಗ ಆ ಜಾಗದಲ್ಲಿ ಯಾರು ಸಹ ಇರಲಿಲ್ಲ. ಇದರಿಂದ ಯಾರಿಗೂ ಸಹ ಹಾನಿಯಾಗಿಲ್ಲ.

ನಾವು ಹಿನ್ನೀರಿನಲ್ಲಿ ಚಿತ್ರಿಕರಣ ನಡೆಸುತ್ತಿದ್ದೇವೆ. ನಾವು ನೀರಿನ ಒಳಗೆ ಯಾವುದೇ ಚಿತ್ರೀಕರಣ ಮಾಡುತ್ತಿಲ್ಲ ಆದರೂ ಸಹ ನಮ್ಮ‌ ಸೆಟ್​​ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 25 ಮಂದಿ ಅನುಭವಿ ಈಜುಗಾರರು, ಸ್ಪೀಡ್ ಬೊಟ್ ಹಾಗೂ ಲೈಫ್ ಜಾಕೆಟ್​​ಗಳು ಮತ್ತು ಅಗತ್ಯ ಸುರಕ್ಷತಾ ಕಿಟ್​​ಗಳನ್ನು ಇಡಲಾಗಿದೆ. ಅಲ್ಲದೇ ನಮ್ಮ ಶೂಟಿಂಗ್ ಸೆಟ್​​ನಲ್ಲಿ ಅಂದು ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ ಎಂದು ತಮ್ಮ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ.

[pj-news-ticker]