Trending

ಮಡೆನೂರು ಮನುಗೆ ಶಾಕ್‌ ಕೊಟ್ಟ ಫಿಲ್ಮ್‌ ಚೇಂಬರ್ : ಸ್ಯಾಂಡಲ್‌ವುಡ್‌ನಿಂದ ಬ್ಯಾನ್‌

Spread the love

ಬೆಂಗಳೂರು: ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ನಟ ಮಡೆನೂರು ಮನು ಸದ್ಯ ಜೈಲಿನಲ್ಲಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ನ ಪ್ರಮುಖ ನಟರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೋ ವೈರಲ್‌ ಆಗಿದ್ದರಿಂದ ಅವರನ್ನು ಚಿತ್ರರಂಗದಿಂದ ಬ್ಯಾನ್‌ ಮಾಡಬೇಕು ಎಂಬ ಆಗ್ರಹ ಅಭಿಮಾನಿಗಳಿಂದ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಮಹತ್ವದ ಸಭೆ ನಡೆಸಿರುವ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಕನ್ನಡದ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನಿಂದ ಮಡೆನೂರು ಮನುವನ್ನು ದೂರ ಇಡಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ. ನರಸಿಂಹಲು ಅವರು, ಕನ್ನಡದ ಪ್ರಮುಖ ಕಲಾವಿದರ ಬಗ್ಗೆ ಮಡೆನೂರು ಮನು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆಡಿಯೋ ವೈರಲ್‌ ಆಗಿತ್ತು. ನಟ ದುರಹಂಕಾರಿ ಮಾತುಗಳನ್ನು ಆಡಿದ್ದಾರೆ, ಹೀಗಾಗಿ ಅವರಿಗೆ ಸಹಕಾರ ನೀಡಬಾರದು ಎಂದು ಎಲ್ಲರೂ ಹೇಳಿದ್ದಾರೆ.

ಮಡೆನೂರು ಮನು ವಿರುದ್ಧ ದಾಖಲಾಗಿರುವ ಆರೋಪಗಳು, ಕೇಸ್‌ಗಳಿಂದ ಮುಕ್ತರಾಗುವವರೆಗೆ ನಾವು ಅಸಹಕಾರ ತೋರಬೇಕು ಎಂದು ನಿರ್ಧರಿಸಿದ್ದೇವೆ. ಅವರು ಕಿರುತೆರೆ, ಹಿರಿತೆರೆ ಸೇರಿ ಚಿತ್ರರಂಗದ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ.‌

ನಟ ಶಿವರಾಜ್‌ಕುಮಾರ್, ದರ್ಶನ್, ಧ್ರುವ ಸರ್ಜಾ ಅವರ ಬಗ್ಗೆ ಮಡೆನೂರು ಮನು ಕೆಟ್ಟದಾಗಿ ಮಾತಾಡಿರುವ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಶಿವಣ್ಣ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಕ್ಕೆ ರಾಜ್‌ ಕುಮಾರ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೇ ಶಿವಣ್ಣನ ಅಭಿಮಾನಿಗಳು ದೂರು ಕೊಟ್ಟ ಬೆನ್ನಲ್ಲೇ ಫಿಲ್ಮ್ ಚೇಂಬರ್ ಮಹತ್ವದ ತಿರ್ಮಾನ ಕೈಗೊಂಡಿದೆ. ಮಡೆನೂರು ಮನು ಅವರನ್ನು ಕಿರುತೆರೆ ಹಾಗೂ ಹಿರಿತೆರೆಯಿಂದ ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ.

[pj-news-ticker]