ಬಂಟ್ವಾಳ (ದಕ್ಷಿಣ ಕನ್ನಡ) : ಪಿಕಪ್ ಚಾಲಕನನ್ನು ಬರ್ಬರವಾಗಿ ಕಡಿದು ಕೊಲೆ ಮಾಡಿದ ಘಟನೆ ತಾಲೂಕಿನ ಕುರಿಯಾಳ ಸಮೀಪದ ಕಾಂಬೋಡಿಯ ಇರಾಕೋಡಿ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ತಿಂಗಳಿಂದೀಚೆಗೆ ಎರಡು ಹತ್ಯೆ ಪ್ರಕರಣಗಳು ನಡೆದಿದ್ದು, ಇದೀಗ ಕುರಿಯಾಳ ಸಮೀಪ ನಡೆದಿರುವುದು ಮೂರನೇ ಪ್ರಕರಣ. ಹತ್ಯೆ ಏಕೆ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಬಂಟ್ವಾಳ ತಾಲೂಕು ಕೊಳತ್ತಮಜಲು ನಿವಾಸಿ ಪಿಕಪ್ ಚಾಲಕ ಹನೀಫ್ ಎಂಬಾತನ ಸಹೋದರ ರಹೀಂ ಕೊಲೆಗೀಡಾದ ವ್ಯಕ್ತಿ.
ಈತ ಇರಾಕೋಡಿ ಎಂಬಲ್ಲಿ ಮರಳು ಅನ್ಲೋಡ್ ಮಾಡುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದಾರೆ.
ರಹೀಮ್ ಜೊತೆಗಿದ್ದ ಇನ್ನೊಬ್ಬ ಶಾಫಿ ಎಂಬಾತನ ಮೇಲೆಯೂ ದಾಳಿ ಮಾಡಲಾಗಿದೆ. ಆತನ ಕೈಗೆ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು, ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
