ಶಿವಮೊಗ್ಗ: ರಾಮಮಂದಿರವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ನವರಿಗೆ ರಾಮನ ಹೆಸರನ್ನು ಬದಲಾಯಿಸಿಕೊಳ್ಳಿ ಎಂದು ನಾವು ಹೇಳಿದ್ದೆವು. ಆದರೆ ರಾಮನಗರದ ಹೆಸರು ಬದಲಾವಣೆ ಮಾಡಿ ಎಂದು ನಾವು ನಿಮಗೆ ಮನವಿ ಮಾಡಿಲ್ಲ ಎಂದು ಬಿಜೆಪಿ ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ತಾಕತ್ತಿದ್ದರೆ ಟಿಪ್ಪು ನಗರಗಳು ಎಲ್ಲೆಲ್ಲಿವೆಯೋ ಅವುಗಳ ಹೆಸರನ್ನು ಬದಲಾವಣೆ ಮಾಡಿ. ನಾವು ದೇಶದಲ್ಲಿ ಅನೇಕ ಹೆಸರನ್ನು ಬದಲಾವಣೆ ಮಾಡಿದ್ದೇವೆ. ರಾಮನಗರ ನಿಮಗೆ ಏನು ಮಾಡಿತ್ತು ಎಂದು ಪ್ರಶ್ನಿಸಿದರು.
ಕೆಎಸ್ಡಿಎಲ್ ರಾಯಭಾರಿಯಾಗಿ ತಮನ್ನಾ ನೇಮಕಕ್ಕೆ ವಿರೋಧ: ದೀಪದ ಬುಡದಲ್ಲಿಯೇ ಕತ್ತಲೆ ಎನ್ನುವಂತೆ ಹಿಂದೆ ಡಾ.ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ನಂದಿನಿ ಹಾಲಿನ ರಾಯಭಾರಿಗಳಾಗಿದ್ದಾಗ ಹಾಲು ಹೆಚ್ಚು ಮಾರಾಟವಾಗಿ ರೈತರಿಗೆ ಶಕ್ತಿ ಸಿಗಲಿಲ್ವಾ, ಈಗ ಯಾಕೆ ಬೇಕು ತಮನ್ನಾ?. ಏನಿದರ ಒಳಗುಟ್ಟು?, ಕನ್ನಡಿಗರಿಗೆ ಮಾಡಿದ ಅಪಮಾನ ಇದು. ಕೆಎಸ್ಡಿಎಲ್ ರಾಯಭಾರಿಯಾಗಲು ತಮನ್ನಾಗೆ 6.2 ಕೋಟಿ ರೂ ನೀಡಿದ್ದೀರಿ ಎಂದು ಕಿಡಿಕಾರಿದರು.
ಅಭಿವೃದ್ಧಿಗೆ ನಿಮ್ಮ ಬಳಿ ಹಣ ಇಲ್ಲ. ಯಾರಾದರೂ ಸತ್ತರೆ ಕೂಡಲು ಹಣ ಇಲ್ಲ. ಗ್ಯಾರಂಟಿ ಯೋಜನೆಗೆ ಹಣ ಇಲ್ಲ. ಬಹಳ ಕಷ್ಟಪಟ್ಟು ಹಣ ಜೋಡಿಸುತ್ತಿದ್ದೀರಿ, ಹೀಗೆ ಕೋಟ್ಯಂತರ ರೂ.ಗಳನ್ನು ಜಾಹೀರಾತಿಗೆ ನೀಡುವ ಮೂಲಕ ಹಣ ಪೂಲು ಮಾಡುತ್ತಿದ್ದೀರಿ. ಮೈಸೂರು ಸ್ಯಾಂಡಲ್ ಸೋಪನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿಚಾರವಾಗಿ ನೀವು ತೆಗೆದುಕೊಂಡ ನಿರ್ಧಾರ ಕನ್ನಡಿಗರಿಗೆ ಹಾಗೂ ಶ್ರೀಗಂಧಕ್ಕೆ ಮಾಡಿರುವ ಅಪಮಾನ ಎಂದರು.
