Breaking
Sat. Apr 20th, 2024

ಫೆ.೨೮ರಂದು ಡಾ. ಶ್ರೀಕಂಠ ಕೂಡಿಗೆ ಅವರಿಗೆ ಜಿ.ಎಸ್.ಎಸ್. ಪುರಸ್ಕಾರ ಪ್ರದಾನ ಸಮಾರಂಭ

By Mooka Nayaka News Feb 26, 2024
Spread the love

ಶಿವಮೊಗ್ಗ : ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ವತಿಯಿಂದ ಫೆ.೨೮ರಂದು ಸಂಜೆ ೬ ಗಂಟೆಗೆ ನಗರದ ಕರ್ನಾಟಕ ಸಂಘದಲ್ಲಿ ಕಾವ್ಯ ಸೌರಭ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ನಮ್ಮ ಪ್ರತಿಷ್ಠಾನದ ವತಿಯಿಂದ ನಾಡಿನ ಖ್ಯಾತ ಸಾಹಿತಿಗಳಿಗೆ ಜಿಎಸ್‌ಎಸ್ ಪುರಸ್ಕಾರ ನೀಡಲಾಗುತ್ತಿದ್ದು, ೨೦೨೩ನೇ ಸಾಲಿನ ಪುರಸ್ಕಾರವನ್ನು ಜಾನಪದ ತಜ್ಞ ಡಾ. ಶ್ರೀಕಂಠ ಕೂಡಿಗೆ ಅವರಿಗೆ ನೀಡಲಾಗುತ್ತಿದೆ ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಂಸದ ಬಿ.ವೈ.ರಾಘವೇಂದ್ರ ಹಾಗೂ ಪ್ರಾಧ್ಯಾಪಕ ಡಾ.ಶ್ರೀಪತಿ ಹಳಗುಂದ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಮ್ಮ ಪ್ರತಿಷ್ಠಾನದ ಅಧ್ಯಕ್ಷ ಡಾ.ಕಿರಣ್ ಆರ್ ದೇಸಾಯಿ ವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮುರುಗೇಶ್, ಕರಿಸಿದ್ದಪ್ಪ ಎಸ್ ಕುಂಬಾರ, ವಿನಯ್, ಡಾ.ಕಿರಣ್ ಆರ್ ದೇಸಾಯಿ ಉಪಸ್ಥಿತರಿದ್ದರು.

ಶ್ರೀಕಂಠ ಕೂಡಿಗೆಯವರ ಕುರಿತು

ಶ್ರೀಕಂಠ ಕೂಡಿಗೆಯವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆಯಲ್ಲಿ. ತಂದೆ ಕೃಷ್ಣಯ್ಯ ಗೌಡ, ತಾಯಿ ಚಿನ್ನಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ಇವರ ಪಿಎಚ್ ಡಿ ಪ್ರಬಂಧ-‘ಕನ್ನಡದಲ್ಲಿ ಲಾವಣಿಗಳು’. ಮೈಸೂರು ಯುವರಾಜ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಶಿವಮೊಗ್ಗ ಜಿಲ್ಲೆಯ ಭದ್ರಾ ಅಣೆಕಟ್ಟಿನ ಬಳಿಯ ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಸ್ನಾತಕೋತ್ತರ ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ , ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ರೀಡರ್ ಆಗಿ, ಪರೀಕ್ಷಾಂಗದ ಕುಲಸಚಿವ (ರಿಜಿಸ್ಟ್ರಾರ್) ರಾಗಿದ್ದರು. ಕಥೆ ‘ಬಂಧನ’ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ , ಉದಯವಾಣಿ ಕಥಾ ಸ್ಪರ್ಧೆಗೆ ಬರೆದ ಕಥೆ ‘ನಮ್ಮಿಬ್ಬರ ನಡುವೆ’, ತುಷಾರ ಮಾಸ ಪತ್ರಿಕಯ ಸ್ಪರ್ಧೆಗೆ ಬರೆದಕ ಕಥೆ ‘ಗೌರಿ ಹಬ್ಬ’ ಬಹುಮಾನ ಗಳಿಸಿವೆ. ಇವರ ಕಥೆಗಳು ಇಂಗ್ಲಿಷ್, ಮಲಯಾಳಂ ಭಾಷೆಗೂ ಅನುವಾದಗೊಂಡಿವೆ.

ಅಂಟಿಗೆ – ಪಂಟಿಗೆ ಪದಗಳು, ಭೂಮಿ ಹುಣ್ಣಿಮೆ, ಜನಪದ ಶಿಸು ಪ್ರಾಸಗಳು, ಜನಪದ ಗಣಿತ, ಕೊಂಡಮಾಮ, ಜಾನಪದ ವಿವಿಧ ಮುಖಗಳು, ಜಾನಪದ ಕೋಶ, ಪ್ರಶಸ್ತಿ ಪಡೆದ ಮಹನೀಯರು (ಇತರರೊಡನೆ) ಕೃತಿಗಳನ್ನು ಪ್ರಕಟಿಸಿದ್ದಾರೆ.

ವಿಮರ್ಶಾ ಕೃತಿಗಳೆಂದರೆ ‘ಒದಗೆ’, ‘ಧ್ಯಾನ’ ‘ಕುವೆಂಪು ಕುರಿತು, ಸಂಪಾದಿತ ಕೃತಿಗಳೆಂದರೆ ಪಾಶ್ಚಾತ್ಯ ಮಹಾ ಕಾವ್ಯಗಳು, 1985ರ ಕಥೆಗಳು, ರನ್ನ, ಬಂಡಾಯ ಸಾಹಿತ್ಯ ಚಳವಳಿ: ಹತ್ತು ವರ್ಷ, ಕುವೆಂಪು ಸಾಹಿತ್ಯ: ವೈಚಾರಿಕ ನೆಲೆಗಳು, ವಸುದೇವ ಭೂಪಾಲಂ; ಸಮಗ್ರ ಸಾಹಿತ್ಯ (2 ಸಂಪುಟಗಳಲ್ಲಿ) ಸಂಪಾದಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಪದವಿ ಪಠ್ಯ ಪುಸ್ತಕಗಳಾದ ತ್ರಿಪದಿ – ಸಾಂಗತ್ಯ ಕಾವ್ಯ, ರಗಳೆ – ಷಟ್ಪದಿ ಕಾವ್ಯ, ಸಮಕಾಲೀನ ಕವಿತೆ, ಪ್ರಾಚೀನ ಕನ್ನಡ ಕಾವ್ಯ (ಭಾಗ -3), ಹೊಸ ಕನ್ನಡ ಕಥಾ ಸಾಹಿತ್ಯ ಭಾಗ-2, ಆಧುನಿಕ ಕನ್ನಡ ಕಾವ್ಯ ಭಾಗ-3, ವಾಣಿಜ್ಯ ಕನ್ನಡ ಭಾಗ-2, ಸಂವಹನ ಕನ್ನಡ ಭಾಗ-1 ಕೃತಿಗಳನ್ನು ಸಂಪಾದಿಸಿದ್ದಾರೆ.

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ , ರಾಜ್ಯ ಸಾಹಿತ್ಯ ಅಕಾಡಮಿ, ಕೇಂದ್ರ ಸಾಹಿತ್ಯ ಅಕಾಡಮಿ, ಡಿ.ಎಸ್.ಇ.ಆರ್.ಟಿ. ಪಠ್ಯ ರಚನಾ ಸಮಿತಿ, ಪ್ರಶಸ್ತಿ ಆಯ್ಕೆ ಸಮಿತಿ, ದೆಹಲಿಯ UPSc ಯ I.A.S ಮತ್ತು I.P.S. ಪರೀಕ್ಷೆಗಳ ಪಠ್ಯ ಪುಸ್ತಕ ರಚನಾ ಸಮಿತಿ, ನ್ಯಾಷನಲ್ ಬುಕ್ ಟ್ರಸ್ಟ್ ಸದಸ್ಯರಾಗಿದ್ದು, ಕುವೆಂಪು ವಿಶ್ವವಿದ್ಯಾಲಯದ ‘ಸಾಧನಾ ಪ್ರಶಸ್ತಿ’, ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಜಾನಪದ ತಜ್ಞ ಪ್ರಶಸ್ತಿ. ಶಿವಮೊಗ್ಗ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘದ ಡಾ.ರಾ.ಗೌ. ಪ್ರಶಸ್ತಿ, ಕರ್ನಾಟಕ ರಾಜ್ಯ ಜಾನಪದ ಯಕ್ಷಗಾನ ಅಕಾಡಮಿಯ ಬೆಳ್ಳಿ ಹಬ್ಬದ ಪುರಸ್ಕಾರ, ರಾಜ್ಯ ಸಾಹಿತ್ಯ ಅಕಾಡಮಿಯ ಗೌರವ ಪುರಸ್ಕಾರ ಲಭಿಸಿವೆ.‘ಕೂಡಿಗೆ’ ಮತ್ತು ‘ಆರುಮುನಿದು’ ಗೌರವ ಗ್ರಂಥಗಳನ್ನು ಅರ್ಪಿಸಲಾಗಿದೆ.

Related Post