Trending

ಶಿವಮೊಗ್ಗ ಏರ್ಪೋರ್ಟ್ ಸ್ಥಗಿತಕ್ಕೆ ಉಡಾನ್ ಯೋಜನೆ ವೈಫಲ್ಯವೇ ಕಾರಣ

Spread the love

ಬೆಂಗಳೂರು: ನಾಗರಿಕ ವಿಮಾನಯಾನದ ಬೆಳವಣಿಗೆಯನ್ನು ಗುರಿಯಾಗಿ ಇಟ್ಟುಕೊಂಡು ರಾಜ್ಯ ಸರ್ಕಾರವು ಸಮಗ್ರ ನೀತಿಯ‌ನ್ನು ರೂಪಿಸಿದ್ದು, ಇದನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೇ ನಿರ್ವಹಿಸಲಿರುವ ವಿಮಾ‌ನ‌ ನಿಲ್ದಾಣಗಳಿಗೆ ಸಂಬಂಧಿಸಿದ ಅನುದಾನ, ವಿಜಿಎಫ್, ಸಮರ್ಥ ಕಾರ್ಯಾಚರಣೆ ಸೇರಿದಂತೆ ಹಲವು ಅಂಶಗಳನ್ನು ಈ ನೀತಿಯಲ್ಲಿ ಪರಿಗಣಿಸಲಾಗಿದೆ. ಇದು ಇಡೀ ದೇಶಕ್ಕೆ ಮಾದರಿಯಾಗಬಹುದು ಎಂದಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಸ್ಥಗಿತವಾಗಿರುವುದಕ್ಕೆ ಕೇಂದ್ರ ಸರ್ಕಾರದ ಉಡಾನ್-2 ನೀತಿಯ ದೋಷಗಳೇ ಕಾರಣ. ಅವರು ಮಂಗಳೂರು ವಿಮಾನ ನಿಲ್ದಾಣವನ್ನು ಅದಾನಿಗೆ ಕೊಟ್ಟರು. ಈಗ ಹುಬ್ಬಳ್ಳಿ ವಿಮಾ‌ನ ನಿಲ್ದಾಣದ ಖಾಸಗೀಕರಣ ಮಾಡುತ್ತಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾವು 1,000 ಕೋಟಿ ರೂಪಾಯಿ ಖರ್ಚು ಮಾಡಿ, ಕೇಂದ್ರದ ಸುಪರ್ದಿಗೆ ಕೊಟ್ಟೆವು. ಅದರಿಂದ ರಾಜ್ಯಕ್ಕೆ ನಯಾಪೈಸೆಯೂ ಬರುತ್ತಿಲ್ಲ. ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿರುವ ಸಂಸದ ರಾಘವೇಂದ್ರ ಅವರು ಇವೆಲ್ಲವನ್ನೂ ತಿಳಿದುಕೊಳ್ಳಬೇಕು ಎಂದರು.

ಉಡಾನ್ ಯೋಜನೆಯನ್ನು ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಬೇಕು. ಇದಾದ ಮೇಲೆ 50:50 ವೆಚ್ಚ ಅನುಪಾತದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದನ್ನು ನಂತರದ ಐದು ವರ್ಷ ನಡೆಸಿದರೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂಬ ಸಲಹೆಯನ್ನು ನಾವು ಕೊಟ್ಟಿದ್ದೆವು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಬೆಲೆ‌ ಕೊಡಲಿಲ್ಲ. ಪರಿಣಾಮವಾಗಿ ಇಂದು ದೇಶದಲ್ಲಿ 17 ವಿಮಾನ ನಿಲ್ದಾಣಗಳು ಸ್ಥಗಿತಗೊಂಡಿವೆ ಎಂದರು.

ನಾವು ವಿಮಾನ‌ ನಿಲ್ದಾಣಗಳನ್ನು ಸಾವಿರಾರು ಕೋಟಿ ಸುರಿದು ನಿರ್ಮಿಸಿ, ಅವುಗಳನ್ನು ಕೇಂದ್ರ ಸರ್ಕಾರಕ್ಕೆ ಬಿಟ್ಟುಕೊಡುವುದು ಸರಿಯಲ್ಲ. ಹೀಗಾಗಿ ಶಿವಮೊಗ್ಗ, ರಾಯಚೂರು, ವಿಜಯಪುರ ವಿಮಾನ ನಿಲ್ದಾಣಗಳನ್ನು ನಾವೇ ನಿರ್ವಹಿಸುತ್ತಿದ್ದೇವೆ.

ಸ್ಥಗಿತಗೊಂಡಿದ್ದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಕೆಕೆಆರ್ಡಿಬಿ ವತಿಯಿಂದ ಶೇಕಡ 80 ಮತ್ತು ರಾಜ್ಯ ಸರ್ಕಾರದಿಂದ ಶೇಕಡ 20ರಷ್ಟು ಹಣ ಕೊಟ್ಟು, ಮತ್ತೆ ವೈಮಾನಿಕ ಸೇವೆ ಆರಂಭಿಸಿದ್ದೇವೆ. ರಾಘವೇಂದ್ರ ಅವರಿಗೆ ಸಾಮರ್ಥ್ಯ ಇದ್ದರೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೀಗೆ ಹಣ ತರಲಿ ನೋಡೋಣ ಎಂದು ಅವರು ಸವಾಲು ಹಾಕಿದ್ದಾರೆ.

[pj-news-ticker]