ಶಿವಮೊಗ್ಗ : ಶಾಲೆಗೆ ತೆರಳಿದ್ದ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಮಾಚೇನಹಳ್ಳಿಯ ಕಿವುಡ ಮತ್ತು ಮೂಗ ಮಕ್ಕಳ ಶಾಲೆಯಲ್ಲಿ ನಡೆದಿದೆ.
ಶಿಕಾರಿಪುರ ತಾಲೂಕಿನ ಅಣ್ಣಪ್ಪಗೆರೆ ಗ್ರಾಮದ ಅಕ್ಷರಾ (ವಿದ್ಯಾರ್ಥಿನಿ) ಮೃತಳು. ಆ.7ರಂದು ಮಾಚೇನಹಳ್ಳಿಯ ಶಾಲೆಗೆ ದಾಖಲಾಗಿದ್ದ ಅಕ್ಷರಾ, ಆ.9ರ ರಾತ್ರಿ ವಾಂತಿ ಹಾಗೂ ಭೇದಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಆ.10ರಂದು ಬೆಳಗ್ಗೆ ಶಾಲೆಗೆ ತೆರಳಿದ್ದ ವೇಳೆ ಅಕ್ಷರಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಶಾಲೆಯ ಸಿಬ್ಬಂದಿ ಆಕೆಯನ್ನು ಸಮೀಪದ ಎನ್ಯು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅಕ್ಷರಾ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವಿನ ನಿಖರ ಕಾರಣ ತಿಳಿದುಬರಬೇಕಿದ್ದು, ಈ ಸಂಬಂಧ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
