Trending

ಶಿವಮೊಗ್ಗ: ಚೆಸ್ ನೋಡುತ್ತಾ ಕುಳಿತಿದ್ದ ವಿದ್ಯಾರ್ಥಿ ದಿಢೀರ್ ಸಾವು : ಶಾಲೆಯಲ್ಲಿ ಶೋಕ

Spread the love

ಶಿವಮೊಗ್ಗ: ಸಹಪಾಠಿಗಳು ಚೆಸ್ ಆಡುತ್ತಿದ್ದುದನ್ನು ನೋಡುತ್ತಾ ಕುಳಿತಿದ್ದ 10ನೇ ತರಗತಿ ವಿದ್ಯಾರ್ಥಿಯೊಬ್ಬ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ತಮ್ಮಡಿಹಳ್ಳಿಯಲ್ಲಿ ನಡೆದಿದೆ.

ತಮ್ಮಡಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ವಿನಯ್ ಜೆ.ಕೆ. (15) ಮೃತ ಬಾಲಕ.

ಶಾಲೆಯಲ್ಲಿ ತರಗತಿ ಚಟುವಟಿಕೆಗಳ ನಡುವೆಯೇ ಸಹಪಾಠಿಗಳು ಚೆಸ್ ಆಟದಲ್ಲಿ ತೊಡಗಿದ್ದಾಗ, ವಿನಯ್ ಅವರ ಆಟವನ್ನು ವೀಕ್ಷಿಸುತ್ತಾ ಕುಳಿತಿದ್ದ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ಆತ ಏಕಾಏಕಿ ಕುಸಿದು ಬಿದ್ದಿದ್ದಾನೆ.

ವಿದ್ಯಾರ್ಥಿ ಕುಸಿದು ಬಿದ್ದಿರುವುದನ್ನು ಗಮನಿಸಿದ ಶಿಕ್ಷಕರು ಹಾಗೂ ಸ್ಥಳದಲ್ಲಿದ್ದವರು ತಕ್ಷಣ ಆತನನ್ನು ಆಯನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮುನ್ನವೇ ವಿನಯ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ವಿನಯ್ ಮೂಲತಃ ಶಿಕಾರಿಪುರದವನಾಗಿದ್ದು, ವಿದ್ಯಾಭ್ಯಾಸಕ್ಕಾಗಿ ತಮ್ಮಡಿಹಳ್ಳಿಯಲ್ಲಿರುವ ಅಜ್ಜನ ಮನೆಯಲ್ಲಿ ವಾಸವಾಗಿದ್ದನು. ಆರೋಗ್ಯದಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡುಬರದೆ ಸಾಮಾನ್ಯವಾಗಿಯೇ ಇದ್ದ ವಿದ್ಯಾರ್ಥಿ ಹಠಾತ್ ಕುಸಿದು ಮೃತಪಟ್ಟಿರುವುದು ಕುಟುಂಬಸ್ಥರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.

ವಿದ್ಯಾರ್ಥಿಯ ಸಾವಿನ ನಿಖರ ಕಾರಣದ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಮರಣದ ಹಿಂದಿನ ಕಾರಣವನ್ನು ಪತ್ತೆಹಚ್ಚುವಂತೆ ಮನವಿ ಮಾಡಿದ್ದಾರೆ.

ಘಟನೆ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತನಿಖೆಯ ಬಳಿಕ ತಿಳಿದುಬರಬೇಕಿದೆ.

[pj-news-ticker]