Trending

ಅಂಬಾರಿ ದುರಂತ: ದೇವಿ ಮೂರ್ತಿ, ಬೆಳ್ಳಿ ಮಂಟಪ ಹೊಸದಾಗಿ ನಿರ್ಮಾಣ – ವಿಶೇಷ ಪೂಜೆಗೆ ಚಿಂತನೆ : ಶಾಸಕ ಚನ್ನಬಸಪ್ಪ

Spread the love

ಶಿವಮೊಗ್ಗ: ದಸರಾ ಮೆರವಣಿಗೆಯಲ್ಲಿ ಸೋಮಣ್ಣ ಆನೆ ಗಾಬರಿಗೊಂಡು ಓಡಿದ ಪರಿಣಾಮ ಕೆಳಕ್ಕೆ ಬಿದ್ದ ಅಂಬಾರಿಗಾಗಿ ವಿಶೇಷ ಧಾರ್ಮಿಕ ಪೂಜೆ ನಡೆಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಗುರುವಾರ ತಮ್ಮ ಕರ್ತವ್ಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ತಾಯಿ ಚಾಮುಂಡೇಶ್ವರಿಯ ಕೃಪೆ. ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಆನೆ ಏಕಾಏಕಿ ಹಿಂದಕ್ಕೆ ತಿರುಗಿ ಓಡಿದೆ. ಈ ವೇಳೆ ಕೆಲವು ಕಡೆ ಸಂಚರಿಸಿದರೂ ಯಾರಿಗೂ ಪ್ರಾಣಾಪಾಯ ಉಂಟುಮಾಡಿಲ್ಲ ಎಂದರು.

ಆನೆ ಓಡಿದ ಸಂದರ್ಭದಲ್ಲಿ ಅಂಬಾರಿ ಕೆಳಕ್ಕೆ ಬಿದ್ದಿದ್ದು, ಚಾಮುಂಡೇಶ್ವರಿ ದೇವಿಯ ಮೂರ್ತಿಯ ಬಲಗೈ ಮುರಿದಿದೆ. ಮೂರ್ತಿಯ ಕೈಯನ್ನು ಸರಿಪಡಿಸುವುದರ ಜೊತೆಗೆ, ಸಂಪೂರ್ಣ ಹಾನಿಗೊಳಗಾದ ಬೆಳ್ಳಿ ಮಂಟಪವನ್ನು ಹೊಸದಾಗಿ ನಿರ್ಮಿಸಬೇಕಿದೆ. ದೇವಿಯ ಮೂರ್ತಿಯನ್ನೂ ಹೊಸದಾಗಿ ಮಾಡಿಸುವ ಚಿಂತನೆ ಇದೆ ಎಂದು ಹೇಳಿದರು.

ಪಾಲಿಕೆಯಿಂದಲೇ ವೆಚ್ಚ ಭರಿಸುವಿಕೆ

ಸುಮಾರು 430 ಕೆ.ಜಿ. ತೂಕದ ಬೆಳ್ಳಿ ಮಂಟಪ ಮಹಾನಗರ ಪಾಲಿಕೆಯ ಆಸ್ತಿಯಾಗಿದ್ದು, ಸಾರ್ವಜನಿಕರ ಆಸ್ತಿಯಾಗಿದೆ. ಹೀಗಾಗಿ ಮಂಟಪದ ಮರುನಿರ್ಮಾಣ ಸೇರಿದಂತೆ ಅಗತ್ಯ ಕಾರ್ಯಗಳ ಸಂಪೂರ್ಣ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ.

ಘಟನೆಯಿಂದ ಕೆಲವು ಕಾರುಗಳು ಹಾಗೂ ಮನೆಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ ಎನ್ನಲು ಸಾಧ್ಯವಿಲ್ಲ

ದಸರಾ ಮೆರವಣಿಗೆಯಲ್ಲಿ ನಡೆದ ಘಟನೆಯ ಜವಾಬ್ದಾರಿಯನ್ನು ಎಲ್ಲರೂ ಹೊತ್ತುಕೊಳ್ಳಬೇಕು. ಕಾರ್ಯಕ್ರಮ ಯಶಸ್ವಿಯಾದಾಗ ಅದರ ಶ್ರೇಯಸ್ಸನ್ನು ಪಡೆಯುವವರು, ಇಂತಹ ಘಟನೆ ನಡೆದಾಗ ಜವಾಬ್ದಾರಿಯಿಂದ ಹಿಂದೆ ಸರಿಯಬಾರದು.

ಆದರೆ, ಇದನ್ನು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಕರೆಯುವುದನ್ನು ಒಪ್ಪಲು ಸಾಧ್ಯವಿಲ್ಲ. ಆನೆಗಳ ವರ್ತನೆ ಯಾವ ಸಂದರ್ಭದಲ್ಲಿ ಹೇಗಿರುತ್ತದೆ ಎಂಬುದನ್ನು ಮೊದಲೇ ಊಹಿಸಲು ಸಾಧ್ಯವಿಲ್ಲ ಎಂದು ಚನ್ನಬಸಪ್ಪ ಹೇಳಿದರು.

ಸೋಮಣ್ಣ ಆನೆ ಮೆರವಣಿಗೆಯಲ್ಲಿ ಮುಂದೆ ಸಾಗುವ ಬದಲು ಹಿಂದಕ್ಕೆ ತಿರುಗಿ ಓಡಿದೆ. ಆನೆ ಈ ರೀತಿ ವರ್ತಿಸಲು ನಿಖರವಾದ ಕಾರಣ ತಿಳಿದಿಲ್ಲ. ಶಿವಪ್ಪ ನಾಯಕ ಅರಮನೆ ಹಾಗೂ ಕೋಟೆ ರಸ್ತೆ ಭಾಗಗಳಲ್ಲಿ ಆನೆ ಸಂಚರಿಸಿದೆ. ಮುಂದಿನ ದಿನಗಳಲ್ಲಿ ದಸರಾ ಉತ್ಸವವನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ ಎಂದು ಅವರು ಹೇಳಿದರು.

[pj-news-ticker]