ಭದ್ರಾವತಿ : ಜೂನ್ 8ರಂದು ಭದ್ರಾವತಿಯ ಅನ್ವರ್ ಕಾಲೋನಿಯಲ್ಲಿ ಟೀ ಅಂಗಡಿ ಎದುರು ನಡೆದ ವಿಶ್ವನ ಮೇಲಿನ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ಇಂದು ಭದ್ರಾವತಿಯ ಎರಡನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
ಪ್ರಕರಣದ ಆರೋಪಿಗಳಾದ ಪ್ರಕಾಶ್ @ ಕರಾಟೆ, ಭರತ್ @ ಕೊಳಕ, ರಾಕೇಶ್, ಆಲ್ವಿನ್ ಹಾಗೂ ಪ್ರಜ್ವಲ್ ಅವರು ನ್ಯಾಯಾಧೀಶ ಚೇತನ ಅವರ ಎದುರು ಹಾಜರಾಗಿ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳ ಶರಣಾಗತಿಯ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ನಿಯೋಜನೆಗೊಂಡು ಭದ್ರತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಿದರು.
ಜೂನ್ 8ರಂದು ಅನ್ವರ್ ಕಾಲೋನಿಯ ಟೀ ಅಂಗಡಿ ಎದುರು ವಿಶ್ವ ಎಂಬಾತನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಭದ್ರಾವತಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಆರೋಪಿಗಳ ಬಂಧನಕ್ಕೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು.
ಪ್ರಸ್ತುತ ಶರಣಾಗಿರುವ ಐವರು ಆರೋಪಿಗಳನ್ನು ನ್ಯಾಯಾಲಯದ ಆದೇಶದಂತೆ ಮುಂದಿನ ಕಾನೂನು ಪ್ರಕ್ರಿಯೆಗೆ ಒಳಪಡಿಸಲಾಗಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
