ಲಖನೌ: ಉತ್ತರ ಪ್ರದೇಶದ ಮಥುರಾದ ಮಂತ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ನದಿಯಲ್ಲಿ ಶುಕ್ರವಾರ ಮಧ್ಯಾಹ್ನ ದೋಣಿ ಮಗುಚಿ ಬಿದ್ದ ಪರಿಣಾಮ ಒಂಬತ್ತು ಭಕ್ತರು ಮುಳುಗಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಆರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೋಣಿಯಿಂದ ಸುಮಾರು ಹದಿನೈದು ಭಕ್ತರನ್ನು ರಕ್ಷಿಸಲಾಗಿದ್ದು, ಅವರಿಗೆ ವೃಂದಾವನದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ನಾಪತ್ತೆಯಾದವರನ್ನು ಪತ್ತೆಹಚ್ಚಲು ಡೈವರ್ಸ್, ಪೊಲೀಸರು ಮತ್ತು ಎನ್ಡಿಆರ್ಎಫ್ ಸಿಬ್ಬಂದಿಯನ್ನು ಒಳಗೊಂಡ ತಂಡವು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.
ಕೆಸಿ ಘಾಟ್ ಬಳಿಯ ಪಾಂಟೂನ್ ಸೇತುವೆಗೆ ದೋಣಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ನ ಲುಧಿಯಾನದಿಂದ 150 ಭಕ್ತರ ಗುಂಪು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ವೃಂದಾವನಕ್ಕೆ ಆಗಮಿಸಿತ್ತು.
ಶುಕ್ರವಾರ ಮಧ್ಯಾಹ್ನ, ಕೆಲವು ಭಕ್ತರು ಯಮುನಾ ನದಿಯಲ್ಲಿ ದೋಣಿ ವಿಹಾರಕ್ಕೆ ಹೊರಟರು. ದೋಣಿ ಚಾಲಕ ಭಕ್ತರನ್ನು ಸವಾರಿಗಾಗಿ ಕರೆದೊಯ್ಯುತ್ತಿದ್ದಾಗ, ಬಲವಾದ ಪ್ರವಾಹದಿಂದಾಗಿ ದೋಣಿ ಇದ್ದಕ್ಕಿದ್ದಂತೆ ಪಾಂಟೂನ್ ಸೇತುವೆಗೆ ಡಿಕ್ಕಿ ಹೊಡೆದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿ.ಪಿ. ಸಿಂಗ್, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ, ಎನ್.ಡಿ.ಆರ್.ಎಫ್ ಮತ್ತು ಪಿಎಸಿ ಡೈವರ್ಗಳ ತಂಡ ಸ್ಥಳಕ್ಕೆ ಧಾವಿಸಿತು. 15 ಭಕ್ತರನ್ನು ರಕ್ಷಿಸಲಾಗಿದ್ದು, 10 ಮಂದಿ ಇನ್ನೂ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ಇನ್ನು ಮೃತರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.
