ಧಾರವಾಡ: ತಾಲೂಕಿನ ರಾಮಾಪುರ ಬಳಿಯ ದಟ್ಟ ಕಾಡಿನಲ್ಲಿ ಕಾರಿನಲ್ಲಿಯೇ ಅನುಮಾನಾಸ್ಪದ ರೀತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿ ಬೈಲಹೊಂಗಲ ಕ್ಷೇತ್ರದ ಮಾಜಿ ಶಾಸಕ ಬಾಬುರಾವ್ ಬೋಳಶೆಟ್ಟಿ ಅವರ ಪುತ್ರ ರಾಜು ಬೋಳಶೆಟ್ಟಿ (53) ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಉಡಕೇರಿ ಗ್ರಾಮದ ನಿವಾಸಿಯಾಗಿರುವ ರಾಜು ಬೋಳಶೆಟ್ಟಿ ಅವರ ಮೃತದೇಹ ಅವರದ್ದೇ ಕಾರಲ್ಲಿ ಸಂಪೂರ್ಣವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರು ಕೂಡ ಸುಟ್ಟು ಹೋಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜು ಅವರು ಪ್ರಗತಿ ಪರ ರೈತರಾಗಿದ್ದು, ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರಲಿಲ್ಲ. ಗ್ರಾಮದಲ್ಲಿ ಯಾವುದೇ ಪಕ್ಷಪಾತ ಇಲ್ಲದೇ ಹಿರಿತನ ಮಾಡುತ್ತಿದ್ದರು. ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದು, ಇವರ ತಂದೆ ಮಾಜಿ ಶಾಸಕರಾಗಿದ್ದಾರೆ. ಇವರಿಗೆ ವೈರತ್ವ ಅಥವಾ ವೈಷಮ್ಯ ಇರಲಿಲ್ಲ. ನಿನ್ನೆ ಸಂಜೆ 6 ಗಂಟೆಗೆ ಊರಿನಿಂದ ತೆರಳಿದ್ದರು. ಇಂದು ಬೆಳಗ್ಗೆಯಷ್ಟೇ ನಮಗೂ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಸ್ಥಳೀಯರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಪೊಲೀಸರ ತನಿಖೆ ಬಳಿಕವೇ ಈ ಪ್ರಕರಣಕ್ಕೆ ಸ್ಪಷ್ಟತೆ ದೊರೆಯುವ ಸಾಧ್ಯತೆಗಳಿವೆ.
