ಬೆಂಗಳೂರು: ಸಚಿವ ಈಶ್ವರ ಖಂಡ್ರೆ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಡುವಿನ ಮಾತಿನ ಸಮರ ಮುಂದುವರೆದಿದೆ. ಒಬ್ಬರಿಗೊಬ್ಬರು ಸವಾಲು-ಪ್ರತಿ ಸವಾಲುಗಳನ್ನು ಹಾಕುತ್ತಿದ್ದಾರೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಎಚ್.ಎಂ.ಟಿ ಭೂಮಿ ಅರಣ್ಯವಾಗಿದ್ದು, ಅರಣ್ಯವಾಗೇ ಉಳಿಯುತ್ತದೆ, ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಹಕ್ಕಿದೆಯೇ ಹೊರತು ಎಚ್‌ಎಂಟಿಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ವಿ.ಐ.ಎಸ್.ಎಲ್.ಗೆ 10,000 ಕೋಟಿ ರೂ. ಅಲ್ಲ 10 ನಯಾ ಪೈಸೆ ಬಂದಿಲ್ಲ:
ಕುಮಾರಸ್ವಾಮಿ ಅವರು 23 ಮೇ 2025ರಂದು ಭದ್ರಾವತಿಯ ಸರ್.ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಪುನಶ್ಚೇತನಗೊಳಿಸಲು 8ರಿಂದ 10 ಸಾವಿರ ಕೋಟಿ ಹೂಡಿಕೆ ಚಿಂತನೆ ನಡೆದಿದೆ. 2 ತಿಂಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ. ವರ್ಷಾಂತ್ಯಕ್ಕೆ ಪ್ರಧಾನಿ ಮೋದಿಯವರೇ ಶಂಕುಸ್ಥಾಪನೆ ಮಾಡ್ತಾರೆ ಅಂತ ಹೇಳಿದ್ರು. 2025 ಮುಗಿದು, 2026ರಲ್ಲಿ 7 ತಿಂಗಳು ಕಳೆಯುತ್ತಾ ಬಂದಿದೆ. 10ಸಾವಿರ ಕೋಟಿ ರೂ. ಇರಲಿ, 10 ನಯಾ ಪೈಸೆ ಕೂಡ ಬಂದಿಲ್ಲ ಎಂದರು.
2014ರಲ್ಲಿಯೇ ಬಳ್ಳಾರಿ ಜಿಲ್ಲೆಯ ವೇಣಿವೀರಾಪುರದಲ್ಲಿ ಉಕ್ಕು ಕಾರ್ಖಾನೆ ಆರಂಭಿಸುವುದಾಗಿ ಹೇಳಿ 2857.54 ಎಕರೆ ಭೂಮಿ ಪಡೆದಿದೆ. ಕೆಐಎಡಿಬಿ 2017ರಲ್ಲಿ ಭೂಮಿಯನ್ನು ಎನ್.ಎಂ.ಡಿ.ಸಿ. ವಶಕ್ಕೆ ನೀಡಿದೆ.
10 ವರ್ಷ ಕಳೆದರೂ ಈ ಕಾರ್ಖಾನೆ ಆರಂಭವೇ ಆಗಿಲ್ಲ. ಇತ್ತ ರೈತರು ಇಲ್ಲಿ ಉಳಿಮೆ ಮಾಡುವಂತಿಲ್ಲ. ಕೈಗಾರಿಕೆಯೂ ಸ್ಥಾಪನೆ ಆಗಿಲ್ಲ. ಇದು ನ್ಯಾಷನಲ್ ವೇಸ್ಟ್ ಅಲ್ಲವೇ. ಇಲ್ಲಿ ಉಕ್ಕು ಕಾರ್ಖಾನೆ ಸ್ಥಾಪಿಸಿದ್ದರೆ 50 ಸಾವಿರ ಜನರಿಗೆ ಉದ್ಯೋಗ ಲಭಿಸುತ್ತಿತ್ತು. ಇದಕ್ಕೆ ನಿಮಗೆ ಯಾರು ಅಡ್ಡಿ ಪಡಿಸಿದ್ದರು. ಏಕೆ ಅಭಿವೃದ್ಧಿ ಮಾಡಲಿಲ್ಲ ಕುಮಾರಸ್ವಾಮಿ ಅವರೇ ಎಂದು ಈಶ್ವರ ಖಂಡ್ರೆ ಪ್ರಶ್ನಿಸಿದರು.
ನೀವು ಕೇಂದ್ರ ಸಚಿವರಾಗಿದ್ದೀರಿ, ಆದರೂ ಕರ್ನಾಟಕದವರು ಎಂಬುದನ್ನು ಮರೆಯಬೇಡಿ. ಕರ್ನಾಟಕದ ಜಲ, ನೆಲ, ಅರಣ್ಯ ಕಾಪಾಡಿ. ಶ್ವಾಸತಾಣ ಉಳಿಸಿ. ಬಿಡದಿಯ ಪರಿಸರದ ಬಗ್ಗೆ ಇರುವ ಕಾಳಜಿಯನ್ನೇ ಎಚ್.ಎಂ.ಟಿ. ಭೂಮಿ ಮತ್ತು ದೇವದಾರಿ ಭೂಮಿಗೂ ತೋರಿಸಿ ಎಂದು ಹೇಳಿದರು.
