ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸ್ಥಾಪಕ ದಿವಂಗತ ಕಾನ್ಶಿರಾಮ್ ಅವರಿಗೆ ಮರಣೋತ್ತರವಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ನೀಡುವಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದು ಮನವಿ ಮಾಡಿದ್ದಾರೆ.
ಕಾನ್ಶಿರಾಮ್ ಅವರ ಜನ್ಮದಿನದ ಅಂಗವಾಗಿ ಈ ಮನವಿ ಸಲ್ಲಿಸಿರುವ ರಾಹುಲ್ ಗಾಂಧಿ, ದಲಿತರು ಮತ್ತು ಶೋಷಿತ ಸಮುದಾಯಗಳ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
“ಕಾನ್ಶಿರಾಮ್ ಅವರು ಭಾರತೀಯ ರಾಜಕೀಯದ ಸ್ವರೂಪವನ್ನೇ ಬದಲಿಸಿದರು. ತಮ್ಮ ಚಳವಳಿಗಳ ಮೂಲಕ ಬಹುಜನರು ಮತ್ತು ಬಡವರಲ್ಲಿ ರಾಜಕೀಯ ಜಾಗೃತಿ ಮೂಡಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಧ್ವನಿ ಮತ್ತು ಮತ ಸಮಾನ ಎಂಬ ಅರಿವು ಮೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ,” ಎಂದು ರಾಹುಲ್ ಶ್ಲಾಘಿಸಿದ್ದಾರೆ.
ದೇಶದ ಸಂವಿಧಾನವು ನೀಡಿದ ಸಮಾನತೆ ಮತ್ತು ಘನತೆಯ ಭರವಸೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಅವರು ಜೀವನವನ್ನೇ ಮುಡಿಪಾಗಿಟ್ಟಿದ್ದರು. ಇದರಿಂದಾಗಿ ದೇಶದ ಪ್ರಜಾಪ್ರಭುತ್ವದ ಅಡಿಪಾಯ ಮತ್ತಷ್ಟು ಗಟ್ಟಿಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದಲಿತ ಮುಖಂಡರು ಮತ್ತು ಕಾರ್ಯಕರ್ತರು ಈ ಬೇಡಿಕೆಯನ್ನು ಬಲವಾಗಿ ಮಂಡಿಸಿದ್ದರು. ಕಾನ್ಶಿರಾಮ್ ಅವರಿಗೆ ಭಾರತ ರತ್ನ ನೀಡುವುದು ಕೋಟ್ಯಂತರ ಜನರ ಆಶಯ ಮತ್ತು ಗೌರವದ ಸಂಕೇತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
