ಶಿವಮೊಗ್ಗ: ಸ್ನೇಹಿತರ ಜತೆ ಈಜಲು ತೆರಳಿದ್ದ ಬಾಲಕನು ಭದ್ರಾ ಎಡದಂಡೆ ಕಾಲುವೆಯಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ.
ಹರಿಗೆ ನಿವಾಸಿ ಶಂಕರ್ (14) ಶನಿವಾರ (ಮಾ.14) ಮಧ್ಯಾಹ್ನ ಸ್ನೇಹಿತರೊಂದಿಗೆ ಮಲವಗೊಪ್ಪದ ಚನ್ನಬಸವೇಶ್ವರ ದೇವಸ್ಥಾನದ ಬಳಿಯ ಭದ್ರಾ ಎಡದಂಡೆ ಕಾಲುವೆಗೆ ಈಜಲು ತೆರಳಿದ್ದ. ಈ ವೇಳೆ ಕಾಲುವೆಯಲ್ಲಿ ಬಿದ್ದು ಮೇಲಕ್ಕೆ ಬರಲಾಗದೆ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ಜತೆಯಲ್ಲಿದ್ದ ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸಂಜೆ ವೇಳೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಕಾಲುವೆಯಲ್ಲಿ ನೀರಿನ ಹರಿವು ಹಾಗೂ ಪ್ರಮಾಣ ಹೆಚ್ಚು ಇದ್ದ ಕಾರಣ ಬಾಲಕನ ಪತ್ತೆ ಸಾಧ್ಯವಾಗಿರಲಿಲ್ಲ.
ಭಾನುವಾರ ಕಾಲುವೆಯ ನೀರನ್ನು ಕಡಿಮೆ ಮಾಡಿದ ನಂತರ ಮತ್ತೆ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಬಾಲಕ ಬಿದ್ದ ಸ್ಥಳದಿಂದ ಸುಮಾರು 100 ಮೀಟರ್ ದೂರದಲ್ಲಿ ಶಂಕರ್ನ ಮೃತದೇಹ ಪತ್ತೆಯಾಗಿದೆ.
ಮೃತ ಶಂಕರ್ ಹರಿಗೆ ನಿವಾಸಿ ಗಣೇಶ್ ಅವರ ಪುತ್ರನಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
