ಬೆಂಗಳೂರು: ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ವಹಿಸಲು ಯತ್ನಿಸಿದ್ದೆನೆಂಬ ಆರೋಪವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ತೀವ್ರವಾಗಿ ತಳ್ಳಿ ಹಾಕಿದ್ದು, ಈ ಆರೋಪಗಳ ಮೂಲಕ ತಮ್ಮ ಮಾನಹಾನಿ ಮಾಡಲಾಗಿದೆ ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹಾಲಪ್ಪ, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ನಿರಂತರವಾಗಿ ಮಾಡಲಾಗುತ್ತಿದ್ದು, ಈ ಕುರಿತು ಗೋಪಾಲಕೃಷ್ಣ ಅವರಿಗೆ ಮಾನನಷ್ಟ ನೋಟಿಸ್ ನೀಡಲಾಗಿದೆ ಎಂದರು. ಸಮರ್ಪಕ ಉತ್ತರ ನೀಡದಿದ್ದರೆ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಸಿಗಂದೂರು ದೇವಸ್ಥಾನ ವಿಷಯದಲ್ಲಿ ತಾವು ಯಾವತ್ತೂ ಸರಕಾರ ಅಥವಾ ಮುಜರಾಯಿ ವಶಕ್ಕೆ ಒಪ್ಪಿಸುವ ಮಾತನ್ನೇ ಆಡಿಲ್ಲ. ತಮ್ಮ ಕುಟುಂಬ ಪೀಳಿಗೆಗಳಿಂದಲೇ ದೇವಸ್ಥಾನದ ಭಕ್ತರಾಗಿದ್ದು, ದೇವಸ್ಥಾನ ಉಳಿಯಬೇಕು, ಬೆಳೆಯಬೇಕು ಎಂಬ ಉದ್ದೇಶದಿಂದ ಮಾತ್ರ ನಿಂತಿದ್ದೇನೆ ಎಂದು ಹೇಳಿದರು.
ತಾವು ಸ್ಪಷ್ಟನೆ ನೀಡಿದ ಬಳಿಕವೂ ಪದೇಪದೇ ಆರೋಪಗಳನ್ನು ಮುಂದುವರಿಸುವ ಮೂಲಕ ಭಕ್ತರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿ ಹಾಗೂ ಧರ್ಮದರ್ಶಿಗಳಲ್ಲಿ ನನ್ನ ಬಗ್ಗೆ ಅನುಮಾನ ಹುಟ್ಟಿಸಿ ಮಾನಹಾನಿ ಮಾಡಲು ಯತ್ನಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಈ ಹಿನ್ನೆಲೆಯಲ್ಲಿ ಬೇಷರತ್ ಕ್ಷಮೆ ಕೇಳಬೇಕು ಅಥವಾ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ರಾಜಕೀಯದಲ್ಲಿ ಆರೋಪ–ಪ್ರತ್ಯಾರೋಪ ಸಹಜವಾದರೂ, ದೇವಾಲಯದ ವಿಷಯದಲ್ಲಿ ಸುಳ್ಳು ಹೇಳುವುದು ಅಪರಾಧವೆಂದು ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿ ಹಾಲಪ್ಪ ಹೇಳಿದರು.
