Trending

ಭಾರತಕ್ಕೆ ಇಂಧನ ಸರಬರಾಜಿಗೆ ಸಿದ್ಧ : ರಷ್ಯಾ

Spread the love

ಮಾಸ್ಕೊ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾದರೆ ಅಥವಾ ಬೆಲೆ ಹೆಚ್ಚಳವಾದರೆ ಭಾರತಕ್ಕೆ ಇಂಧನ ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ರಷ್ಯಾ ಹೇಳಿದೆ.

‘ಗಲ್ಫ್ ರಾಷ್ಟ್ರಗಳ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೈಲ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ಭಾರತಕ್ಕೆ ಇಂಧನ ಪೂರೈಕೆ ಸಿದ್ಧರಿದ್ದೇವೆ’ಎಂದು ರಷ್ಯಾದ ಮೂಲಗಳು ತಿಳಿಸಿವೆ ಎಂದು ವರದಿ ತಿಳಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಹಗೆತನ ತೀವ್ರಗೊಂಡಿದ್ದು, ವ್ಯಾಪಾರ, ಹಡಗು ಮಾರ್ಗಗಳು ಮತ್ತು ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತಿದೆ. ಈ ನಡುವೆ, ಭಾರತವು ಪಶ್ಚಿಮ ಏಷ್ಯಾದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವಂತೆಯೇ ರಷ್ಯಾದಿಂದ ಹೇಳಿಕೆ ಬಂದಿದೆ.

ಇರಾನ್ ತನ್ನ ಪ್ರತೀಕಾರದ ದಾಳಿಯಲ್ಲಿ ತೈಲ ಸಂಸ್ಕರಣಾಗಾರಗಳು ಮತ್ತು ಉತ್ಪಾದನಾ ತಾಣಗಳು ಸೇರಿದಂತೆ ಗಲ್ಫ್ ದೇಶಗಳ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಇದರ ಜೊತೆಗೆ, ಎಲ್ಲ ವಾಣಿಜ್ಯ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದ ಹೊರ್ಮುಜ್ ಜಲಸಂಧಿಯನ್ನು ಸಹ ಮುಚ್ಚಿದೆ. ಆದರ ಮೂಲಕ ಹಾದುಹೋಗಲು ಯತ್ನಿಸುವ ಯಾವುದೇ ಹಡಗಿಗೆ ಬೆಂಕಿ ಹಚ್ಚಲಾಗುವುದು ಎಂದು ಇರಾನ್ ರೆವಲ್ಯೂಶನರಿ ಗಾರ್ಡ್ಸ್(ಐಆರ್‌ಜಿಸಿ) ಎಚ್ಚರಿಸಿದೆ.

ಭಾರತದಲ್ಲಿ ಅಲ್ಪಾವಧಿಯ ಅಡೆತಡೆಗಳನ್ನು ನಿರ್ವಹಿಸಲು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಇದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ  ಹೇಳಿದ್ದರು.

[pj-news-ticker]