ದೆಹಲಿ : ದೇಶವನ್ನೇ ಬೆಚ್ಚಿ ಬೀಳಿಸಿದ, ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಉಗ್ರರ ಸಂಚು ಒಂದೊಂದಾಗಿಯೇ ಹೊರ ಬೀಳುತ್ತಿದೆ. ಆತ್ಮಹತ್ಯಾ ಬಾಂಬರ್ ಉಮರ್ ನಬಿ ಕಾರು ಚಲಾಯಿಸಿ ಕೆಂಪು ಕೋಟೆ ಮೆಟ್ರೋ ಸ್ಟೇಷನ್ ಬಳಿ ಸ್ಫೋಟಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಅಂಶ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೃತ್ಯದ ಹಿಂದೆ ನಿಷೇಧಿತ ಉಗ್ರ ಸಂಘಟನೆ ಅನ್ಸಾರ್ ಘಜ್ವತ್-ಉಲ್-ಹಿಂದ್ನ ಸಿದ್ಧಾಂತ ಪ್ರಚಾರ ನಡೆಸುವ ಉದ್ದೇಶ ಹೊಂದಲಾಗಿತ್ತು ಎಂದು ಹೇಳಿದ್ದಾರೆ. ತನಿಖೆಯ ನೇತೃತ್ವ ವಹಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸ್ಫೋಟವು ಉಗ್ರಗಾಮಿ ಜಾಲಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಸಿದ್ಧಾಂತವನ್ನು ಪ್ರಚಾರ ನಡೆಸುವ ಗುರಿ ಹೊಂದಿತ್ತು ಎಂದು ವಿವರಿಸಿದ್ದಾರೆ.
ಉಮರ್ ನಬಿ ಮತ್ತು ಆತನ ಸಹಚರರು ಪಿತೂರಿಯ ಭಾಗವಾಗಿ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು. ಉಗ್ರರು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸಲು ದೊಡ್ಡ ಪ್ರಮಾಣದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನುವ ವಿಚಾರವೂ ತನಿಖೆ ವೇಳೆ ಬಯಲಿಗೆ ಬಂದಿದೆ.
ಕಾಶ್ಮೀರ ಮೂಲದ ವೈದ್ಯ ಉಮರ್ ಹರಿಯಾಣದ ಅಲ್-ಫಲಾಹ್ ವಿಶ್ವವಿದ್ಯಾನಿಲಯದಲ್ಲಿ ಕಾರ್ಯ ನಿರ್ವಹಿಸುತ್ತ ತೆರೆ ಮರೆಯಲ್ಲಿ ಉಗ್ರ ಚಟುವಟಿಕೆ ನಡೆಸುತ್ತಿದ್ದ. ಆತನಿಗೆ ಸೇರಿದ ಕಾರ್ನಲ್ಲಿ ಬೃಹತ್ ಪ್ರಮಾಣದ ಸ್ಫೋಟಕ ವಸ್ತು ಪತ್ತೆಯಾಗಿದ್ದು, ವ್ಯವಸ್ಥಿತ ದಾಳಿಗೆ ಸಂಚು ರೂಪಿಸಿದ್ದ ಎನ್ನುವುದು ಬೆಳಕಿಗೆ ಬಂದಿದೆ.
ಹಲವು ಸಿಮ್ ಖರೀದಿ
ತನ್ನ ಕೃತ್ಯ ಸುಲಭವಾಗಿ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಉಮರ್ ಹಲವು ಸಿಮ್ಗಳನ್ನು ಬಳಸಿರುವುದೂ ಗೊತ್ತಾಗಿದೆ. ಈ ಸಿಮ್ಗಳನ್ನು ಖರೀದಿಸಿದ ನಂತರ ಆತ ಉಗ್ರವಾದವನ್ನು ಪ್ರಸಾರ ಮಾಡುತ್ತಿದ್ದ ಮತ್ತು ಸಹಚರರೊಂದಿಗೆ ರಹಸ್ಯವಾಗಿ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದ. ಜತೆಗೆ ಎಜಿಎಚ್ನ ಸಿದ್ಧಾಂತವನ್ನು ವ್ಯಾಪಕವಾಗಿ ಪ್ರಚಾರ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಮರ್ ನಬಿಗೆ ಸಹಾಯ ಮಾಡಿದ ಡಾ. ಶಾಹೀನ್ ಸಯೀದ್, ಜಾಸಿರ್ ವಾನಿ ಸೇರಿದಂತೆ ಇತರ ಆರೋಪಿಗಳ ಪಾತ್ರವೂ ತನಿಖೆಯ ವೇಳೆ ಬಹಿರಂಗಗೊಂಡಿದೆ. ಇವರು ಸ್ಫೋಟಕಗಳು ಮತ್ತು ಐಇಡಿಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳನ್ನು ಸಂಗ್ರಹಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
