ನವದೆಹಲಿ: ಬೀದಿ ನಾಯಿಗಳ ಸಂತಾನಹರಣ ಯೋಜನೆಯನ್ನು ಸರಿಯಾಗಿ ಜಾರಿಗೆ ತಾರದೇ ಇರುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡುವವರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಬೀದಿ ನಾಯಿ ಕಡಿತದಿಂದ ಉಂಟಾಗುವ ಸಾವಿಗೆ ಭಾರಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಬೀದಿ ನಾಯಿ ಕಡಿತದಿಂದ ಉಂಟಾಗುವ ಪರಿಣಾಮಗಳಿಗೆ ಅಧಿಕಾರಿಗಳು ಮತ್ತು ಬೀದಿ ನಾಯಿಗಳಿಗೆ ಆಹಾರ ನೀಡುವವರು ಹೊಣೆಗಾರರಾಗಿರುತ್ತಾರೆ ಎಂದು ಹೇಳಿದೆ.
ಬೀದಿ ನಾಯಿಗಳ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ, ಎಬಿಸಿ ನಿಯಮಗಳನ್ನು ಜಾರಿಗೆ ತರುವಲ್ಲಿ ವಿಫಲರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಬೀದಿ ನಾಯಿಗಳಿಂದ ಉಂಟಾಗುವ ದಾಳಿಗಳಿಗೆ ಅವುಗಳಿಗೆ ಆಹಾರ ನೀಡುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದೆ.
ಬೀದಿ ನಾಯಿಗಳ ಸಂತಾನಹರಣ ಯೋಜನೆಯನ್ನು ಸರಿಯಾಗಿ ಜಾರಿಗೆ ತರದಿರುವ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಈ ವಿಷಯದ ಕುರಿತು 1950 ರ ದಶಕದಿಂದಲೂ ಸಂಸತ್ತು ಪರಿಶೀಲನೆಯನ್ನೇ ನಡೆಸುತ್ತಿದೆ. ಈಗ ಸಮಸ್ಯೆ ಸಾವಿರ ಪಟ್ಟು ಹೆಚ್ಚಾಗಿದೆ. ಇದರಲ್ಲಿ ಆಡಳಿತದ ವೈಫಲ್ಯ ಎದ್ದು ಕಾಣುತ್ತದೆ. ನಾಯಿ ಕಡಿತದಿಂದ ಪ್ರಾಣ ಕಳೆದುಕೊಂಡಿರುವುದಕ್ಕೆ ಸರ್ಕಾರವನ್ನೇ ಜವಾಬ್ದಾರಿಯುತವನ್ನಾಗಿ ಮಾಡಿ ಭಾರಿ ದಂಡವನ್ನು ವಿಧಿಸಲಾಗುವುದು. ಇನ್ನು ಬೀದಿ ನಾಯಿಗಳಿಗೆ ಆಹಾರ ನೀಡುವವರು ಅಷ್ಟೊಂದು ಕರುಣೆ ಇದ್ದರೆ ಅವುಗಳನ್ನು ಮನೆಗಳಿಗೆ ಕರೆದೊಯ್ದು ಸಾಕುವಂತೆ ಹೇಳಿದೆ.
ಕಳೆದ ವಾರ ಸುದೀರ್ಘ ಚರ್ಚೆ ನಡೆಸಿದ ಬಳಿಕ ಮತ್ತೆ ಈ ವಾರ ಇದೇ ವಿಷಯವನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಎಲ್ಲಾ ಬೀದಿ ನಾಯಿಗಳನ್ನು ತೆಗೆದುಹಾಕಬೇಕು ಎಂದು ಹೇಳುತ್ತಿಲ್ಲ. ಆದರೆ ನಿಯಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಎರಡೂ ಕಡೆಯ ವಕೀಲರು ಶಾಸನಬದ್ಧ ನಿಬಂಧನೆಯ ಅನುಷ್ಠಾನಕ್ಕೆ ಅವಕಾಶ ನೀಡುವಂತೆ ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಕ್ರಿಯಾ ಯೋಜನೆಯನ್ನು ಹೊಂದಿವೆಯೇ ಅಥವಾ ಇಲ್ಲವೇ ಎಂದು ಪ್ರಶ್ನಿಸಿದ್ದು, ಈ ನಿಟ್ಟಿನಲ್ಲಿ ಶಾಸನಬದ್ಧ ನಿಬಂಧನೆಯ ಅನುಷ್ಠಾನವಾಗಬೇಕು. ಮತ್ತೆ ಮತ್ತೆ ಒಂದೇ ವಿಷಯಗಳು ವಿಚಾರಣೆಗೆ ಬರುತ್ತಿವೆ. ಇದು ನ್ಯಾಯಾಲಯದ ವಿಚಾರಣೆಗಿಂತ ಸಾರ್ವಜನಿಕ ವೇದಿಕೆಯಾಗಿದೆ ಎಂದು ತಿಳಿಸಿದೆ.
ಗುಜರಾತ್ ಹೈಕೋರ್ಟ್ನಲ್ಲಿ ವಕೀಲರೊಬ್ಬರನ್ನು ಕಚ್ಚಿದ ಪ್ರಕರಣವನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್, ನಾಯಿ ಪ್ರಿಯರು ಎಂದು ಕರೆಸಿಕೊಳ್ಳುವವರನ್ನು ಕೂಡ ತರಾಟೆಗೆ ತೆಗೆದುಕೊಂಡಿತು.
