Trending

ವ್ಯಾಪಾರ ಒಪ್ಪಂದದಲ್ಲಿ ಬದಲಾವಣೆ ಇಲ್ಲ, ಭಾರತ ಸುಂಕವನ್ನು ಪಾವತಿಸಲೇಬೇಕು : ಡೊನಾಲ್ಡ್ ಟ್ರಂಪ್

Spread the love

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ( India-US trade deal) ಯಾವುದೇ ಬದಲಾವಣೆ ಇಲ್ಲ. ಭಾರತ ಸುಂಕವನ್ನು ಪಾವತಿಸಲಿದೆ. ನಾವು ಪಾವತಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್  ಅವರ ಜಾಗತಿಕ ಸುಂಕಗಳನ್ನು ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದು ನ್ಯಾಯಯುತ ಒಪ್ಪಂದವಾಗಿದೆ ಎಂದು ತಿಳಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳನ್ನು ಯುಎಸ್ ಸುಪ್ರೀಂ ಕೋರ್ಟ್ ಕಾನೂನುಬಾಹಿರವೆಂದು ಪರಿಗಣಿಸಿದ ಬಳಿಕ ಅವರು ಶೇ. 10 ಜಾಗತಿಕ ಸುಂಕಗಳನ್ನು ಘೋಷಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಭಾರತ ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ಮಾತನಾಡಿ, ಈಗಾಗಲೇ ನಿರ್ಧರಿಸಿರುವ ಸುಂಕಗಳನ್ನು ಭಾರತ ಪಾವತಿಸುವುದನ್ನು ಮುಂದುವರಿಸುತ್ತದೆ. ಅಮೆರಿಕ ಯಾವುದೇ ಸುಂಕಗಳನ್ನು ಪಾವತಿಸುವುದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದ್ದರು. ಅಮೆರಿಕವು ಭಾರತೀಯ ರಫ್ತಿನ ಮೇಲೆ ಶೇ. 18ರಷ್ಟು ಸುಂಕವನ್ನು ವಿಧಿಸಲಿದೆ. ಅಮೆರಿಕ ರಫ್ತಿನ ಮೇಲಿನ ಸುಂಕಗಳು ಶೂನ್ಯವಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಇದಾದ ಬಳಿಕ ಭಾರತ ಮತ್ತು ಅಮೆರಿಕ ಮಧ್ಯಂತರ ವ್ಯಾಪಾರ ವ್ಯವಸ್ಥೆಯ ಬಾಹ್ಯರೇಖೆಗಳನ್ನು ವಿವರಿಸುವ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಷ್ಯಾದ ಕಚ್ಚಾ ತೈಲ ಖರೀದಿಗಾಗಿ ಭಾರತದ ಮೇಲೆ ವಿಧಿಸಲಾದ ಶೇ. 25ರಷ್ಟು ಸುಂಕಗಳನ್ನು ಅಮೆರಿಕ ಹಿಂತೆಗೆದುಕೊಳ್ಳುವ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಹಾಕಿದರು. ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಮುಂದಿನ ದಿನಗಳಲ್ಲಿ ಭಾರತದ ನಿಯೋಗವೊಂದು ಅಮೆರಿಕಕ್ಕೆ ಪ್ರಯಾಣಿಸಲಿದೆ ಎಂದು ವರದಿಯಾಗಿದೆ.

[pj-news-ticker]