Trending

ಸಾಗರ ಜಿಲ್ಲೆಯ ಕನಸನ್ನು ಲಘುವಾಗಿ ತೆಗೆದುಕೊಳ್ಳಬೇಡಿ : ಜಿಲ್ಲಾ ಹೋರಾಟ ಸಮಿತಿ ಎಚ್ಚರಿಕೆ

Spread the love

ಸಾಗರ: ಸಾಗರ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ಬುಧವಾರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ನೀಡಲಾಗಿದ್ದ ಸಾಗರ ಬಂದ್ ಕರೆಗೆ ಪೇಟೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ.

ನಗರದ ಹೃದಯ ಭಾಗದ ಬಹುತೇಕ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗಳು ಸಂಪೂರ್ಣ ಬಂದ್ ಮಾಡಿ ಜಿಲ್ಲಾ ಹೋರಾಟಕ್ಕೆ ಬೆಂಬಲ ನೀಡಿದವು.

ಪಟ್ಟಣದ ಸಾಗರ ಹೋಟೆಲ್ ವೃತ್ತ, ಅಶೋಕ ರಸ್ತೆ, ಸೊರಬ ರಸ್ತೆ, ತಿಲಕ್ ರಸ್ತೆ, ಜೆ.ಸಿ. ರಸ್ತೆ ಸೇರಿ ಎಲ್ಲಾ ಭಾಗಗಳಲ್ಲೂ ಬಹುತೇಕ ಅಂಗಡಿಗಳನ್ನು ಮುಚ್ಚಲಾಗಿತ್ತು. ಖಾಸಗಿ ಬಸ್ ಮಾಲೀಕರ ಸಂಘ ಬಂದ್‌ಗೆ ಬೆಂಬಲ ಸೂಚಿಸಿದ್ದರ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗಗಳಿಂದ ಜನರು ಪೇಟೆಗೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಒದ್ದಾಡುವಂತೆ ಆಗಿತ್ತು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು. ಖಾಸಗಿ ಬೈಕ್, ಕಾರು ಇನ್ನಿತರ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.

ಬೆಳಿಗ್ಗೆ ನಗರದ ಬಿ.ಎಚ್.ರಸ್ತೆ, ಐತಪ್ಪ ಸರ್ಕಲ್, ಜೋಗ ಬಸ್ ನಿಲ್ದಾಣ ಇನ್ನಿತರ ಭಾಗದಲ್ಲಿ ಟೈರ್‌ಗೆ ಬೆಂಕಿ ಹಚ್ಚುವ ಮೂಲಕ ಜಿಲ್ಲಾ ಹೋರಾಟದ ಕಾವು ಹೆಚ್ಚಿಸುವ ಪ್ರಯತ್ನ ನಡೆಯಿತು. ಮಹಾಗಣಪತಿ ದೇವಸ್ಥಾನದಿಂದ ಸಾಗರ ಜಿಲ್ಲಾ ಹೋರಾಟ ಸಮಿತಿ ಅಯೋಜಿಸಿದ್ದ ಪ್ರತಿಭಟನಾ ರ‍್ಯಾಲಿಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಸಾಗರ ಹೋಟೆಲ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಸಮಿತಿಯ ತೀ.ನ.ಶ್ರೀನಿವಾಸ್, ರಾಜ್ಯದಲ್ಲಿ ಜಿಲ್ಲೆಯಾಗುವ ಅರ್ಹತೆ ಏನಾದರೂ ಇದ್ದರೆ ಅದು ಸಾಗರಕ್ಕೆ ಮಾತ್ರ. ಇಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿ, ಡಿ.ಎಫ್.ಓ. ಕಚೇರಿ ಸೇರಿ ಅನೇಕ ಕಚೇರಿಗಳು ನಾಲ್ಕು ತಾಲೂಕುಗಳ ವ್ಯಾಪ್ತಿಗೆ ಒಳಪಟ್ಟಿದ್ದು ಐದು ದಶಕಕ್ಕೂ ಹೆಚ್ಚು ಕಾಲದಿಂದ ತಮ್ಮ ಸೇವೆ ನೀಡುತ್ತಿದೆ. ಸಾಗರ ಜಿಲ್ಲೆ ಹೋರಾಟವನ್ನು ಸರ್ಕಾರ ಹಗುರವಾಗಿ ಪರಿಗಣಿಸಬಾರದು. ಕ್ಷೇತ್ರದ ಶಾಸಕರಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ನಮ್ಮ ಹಕ್ಕೊತ್ತಾಯ ಮಂಡಿಸಲು ಅವಕಾಶ ಕಲ್ಪಿಸಿ ಎಂದು ಮೂರ್ನಾಲ್ಕು ಬಾರಿ ಮನವಿ ಮಾಡಿದ್ದೇವೆ.

ಮುಂದಿನ 24 ಗಂಟೆಯೊಳಗೆ ಶಾಸಕರು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಸಾಗರ ಜಿಲ್ಲೆ ಘೋಷಣೆ ಮಾಡುವ ತನಕ ಹೋರಾಟದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೆ ಇಲ್ಲ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಹೋಟೆಲ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಎನ್.ಉಮೇಶ್, ಎಸ್.ವಿ.ಹಿತಕರ ಜೈನ್ ಮಾತನಾಡಿದರು.

ಪ್ರಮುಖರಾದ ಮಂಜುನಾಥ್ ಆಚಾರ್, ಸುಂದರ ಸಿಂಗ್, ತಾರಾಮೂರ್ತಿ, ಅಶ್ವಿನಿಕುಮಾರ್, ಕೆ.ವಿ.ಜಯರಾಮ್, ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ಮಹ್ಮದ್ ಖಾಸಿಂ, ವೀರಭದ್ರಪ್ಪ ಜಂಬಿಗೆ, ಆರ್. ಶ್ರೀನಿವಾಸ್, ಅಜೀಂ, ಸದ್ದಾಂ, ಕನ್ನಪ್ಪ ಬೆಳಲಮಕ್ಕಿ, ಭದ್ರೇಶ್, ಕೆ.ಎನ್.ನಾಗೇಂದ್ರ, ನಾಗೇಂದ್ರ ಕುಮಟಾ, ಮನೋಜ್ ಕುಗ್ವೆ, ಸುಧೀಂದ್ರ, ಕೋಮಲ್ ರಾಘವೇಂದ್ರ, ಎಂ.ಬಿ.ಗಿರೀಶ್ ಗೌಡ, ಎಂ.ರಾಘವೇಂದ್ರ ಇನ್ನಿತರರು ಹಾಜರಿದ್ದರು.

[pj-news-ticker]