ಆನಂದಪುರ: ತಾಲೂಕಿನ ತ್ಯಾಗರ್ತಿ ಸಮೀಪದ ಕುಡಿಗೆರೆ ಗ್ರಾಮದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜಂಬಿಟ್ಟಿಗೆ ಕಲ್ಲು ಗಣಿಗಾರಿಕೆಗೆ ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದಾಗ, ಸ್ಥಳದಲ್ಲಿ ಲಾರಿಗೆ ಕಲ್ಲುಗಳನ್ನು ತುಂಬುವ ಕೆಲಸ ನಡೆಯುತ್ತಿತ್ತು. ಅಧಿಕಾರಿಗಳ ವಾಹನವನ್ನು ದೂರದಲ್ಲೇ ಗಮನಿಸಿದ ಚಾಲಕ ಹಾಗೂ ಗಣಿಗಾರಿಕೆಯಲ್ಲಿ ತೊಡಗಿದ್ದ ಇತರರು ಲಾರಿಯನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ವೇಳೆ ಲಾರಿ ಸೇರಿದಂತೆ ಗಣಿಗಾರಿಕೆಗೆ ಬಳಸುತ್ತಿದ್ದ ಕಲ್ಲುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ಅಕ್ರಮ ಚಟುವಟಿಕೆಗಳಿಗೆ ತಡೆ ನೀಡಲು ಮುಂದಾಗಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ನಿಯಮ ಬಾಹಿರವಾಗಿ ಕಲ್ಲು ಸಾಗಾಟ ಮಾಡುತ್ತಿದ್ದ ಪರಿಣಾಮ ಸರ್ಕಾರಕ್ಕೆ ಸುಮಾರು ₹1,42,800 ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳೀಯರು ಈ ಅಕ್ರಮ ಗಣಿಗಾರಿಕೆಯಿಂದ ಪರಿಸರ ಹಾನಿಯಾಗುತ್ತಿದೆ ಎಂದು ದೂರಿದ್ದು, ಇಂತಹ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಈ ಪ್ರಕರಣ ಸಂಬಂಧ ಕಲ್ಲು ಕೋರೆ ಮಾಲೀಕರು, ವಾಹನ ಚಾಲಕ ಹಾಗೂ ಮಾಲೀಕನ ವಿರುದ್ಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
