ಪಟ್ನಾ: ಬಿಹಾರದ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ಬಾರಿ ಅಧಿಕಾರದ ಗದ್ದುಗೆ ಏರುವ ಆತ್ಮವಿಶ್ವಾಸದಲ್ಲಿರುವ ಆರ್ಜೆಡಿ ಪಕ್ಷದ ಹಿರಿಯ ನಾಯಕ ಲಾಲೂ ಪ್ರಸಾದ್ ಯಾದವ್ ಅವರು ಚುನಾವಣೆ ಹೊಸ್ತಿಲಲ್ಲೇ ಮೂರು ಪ್ರಮುಖ ಕದನಗಳನ್ನು ಎದುರಿಸುತ್ತಿದ್ದಾರೆ.
ಯುಪಿಎ-1ರ ಅವಧಿಯಲ್ಲಿ ರೈಲು ಖಾತೆ ಸಚಿವರಾಗಿದ್ದಾಗ ನಡೆದಿದೆ ಎನ್ನಲಾದ ಐಆರ್ಸಿಟಿಸಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದ ನ್ಯಾಯಾಲಯದ ಆದೇಶ ಅಕ್ಟೋಬರ್ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ.
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದ (NDA) ಅಧಿಕಾರವನ್ನು ಕಸಿದುಕೊಂಡು ತಮ್ಮ ಪುತ್ರ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸುವ ಮತ್ತೊಂದು ಹೋರಾಟವನ್ನು ಅವರು ನಡೆಸುತ್ತಿದ್ದಾರೆ.
‘ಪರಿವಾರ’ದೊಳಗೆ ಮತ್ತೊಂದು ಯುದ್ಧವನ್ನೂ ಲಾಲೂ ಪ್ರಸಾದ್ ಯಾದವ್ ಎದುರಿಸುತ್ತಿದ್ದಾರೆ. ತಮ್ಮ ಪುತ್ರಿ ರೋಹಿಣಿ ಆಚಾರ್ಯ ಅವರು ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ. ತಮ್ಮ ಸೋದರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಹಾಗೂ ಸೋದರಿ ಮೀಸಾ ಭಾರ್ತಿ (ಹಾಲಿ ಲೋಕಸಭಾ ಸದಸ್ಯ) ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅನ್ಫಾಲೊ ಮಾಡುವ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತೇಜಸ್ವಿ ಅವರ ಆಪ್ತ ಹಾಲಿ ರಾಜ್ಯಸಭಾ ಸದಸ್ಯ ಸಂಜಯ್ ಯಾದವ್ ಕಾರಣ ಎಂದೂ ಹೇಳಲಾಗುತ್ತಿದೆ. ಇದರಿಂದ ಲಾಲೂ ಪ್ರಸಾದ್ ಯಾದವ್ ಅವರು ಕುಟುಂಬದೊಳಗಿನ ಕದನವನ್ನೂ ಎದುರಿಸುತ್ತಿದ್ದಾರೆ.
ಬರಲಿರುವ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ರೋಹಿಣಿ ವ್ಯಕ್ತಪಡಿಸಿದ್ದರು. ಆದರೆ ಅದಕ್ಕೆ ತೇಜಸ್ವಿ ತಣ್ಣೀರೆರಚಿದರು. ಇದಕ್ಕೆ ಸಂಜಯ್ ಯಾದವ್ ಕಾರಣ ಎಂದೇ ಹೇಳಲಾಗುತ್ತಿದೆ. ಈ ವಿವಾದದಲ್ಲಿ ಲಾಲೂ ಪ್ರಸಾದ್ ಅವರು ತಮ್ಮ ಮಗನ ಪರವಾಗಿ ನಿಂತರು ಎಂದು ಅಸಮಾಧಾನಗೊಂಡ ರೋಹಿಣಿ ತನ್ನ ಕುಟುಂಬ ಸದಸ್ಯರನ್ನು ಅನುಸರಿಸದಿರಲು ತೀರ್ಮಾನಿಸಿದ್ದಾರೆ.
ತಮ್ಮ ಪತಿ ಶಮ್ಷೇರ್ ಸಿಂಗ್, ಕವಿ ರಾಹತ್ ಇಂದೋರಿ ಮತ್ತು ಮಾಧ್ಯಮ ಸಂಸ್ಥೆಗಳನ್ನು ಮಾತ್ರ ರೋಹಿಣಿ ಸದ್ಯ ಫಾಲೊ ಮಾಡುತ್ತಿದ್ದಾರೆ.
‘ನನಗಾಗಿ ಅಥವಾ ಮತ್ತಾರಿಗಾದರೂ ನಾನು ನೆರವು ಕೇಳಿದ್ದರೆ ಅಥವಾ ನನ್ನ ತಂದೆಗೆ ನಾನು ಮೂತ್ರಪಿಂಡ ದಾನ ಮಾಡಿರುವುದೇ ಸುಳ್ಳು ಎಂದು ಸಾಬೀತುಪಡಿಸಿದರೆ ರಾಜಕೀಯವಾಗಿ ಮತ್ತು ಸಾರ್ವಜನಿಕ ಬದುಕಿನಿಂದಲೇ ನಿವೃತ್ತಿ ಘೋಷಿಸುತ್ತೇನೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ತಮ್ಮ ಕುಟುಂಬದವರ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
