ಚಿಕ್ಕಮಗಳೂರು: ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ವರಿಷ್ಠರಾದ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿ ಗಾರರ ಜತೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಹಿನ್ನಲೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಶೋಭಾ ಕರಂದ್ಲಾಜೆ ಅವರು ಕಳೆದ ಚುನಾವಣೆಯಲ್ಲಿ ಮೂರುವರೆ ಲಕ್ಷಕ್ಕೂ ಅಧಿಕ ಮತಗಳಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರ ದಿಂದ ಗೆಲುವು ಸಾಧಿಸಿದ್ದರು. ಈ ಬಾರೀ ಇನ್ನೂ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಅದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಸ್ಥಾನಕ್ಕೆ 28 ಸ್ಥಾನ ಗೆಲ್ಲಬೇಕು ಎಂದು ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಅದಕ್ಕೆ ಪೂರಕವಾದ ವಾತಾವರಣವಿದೆ. ಇದರಲ್ಲಿ ಯಶಸ್ವಿಯಾಗುತ್ತೇವೆ ಎಂದು ಹೇಳಿದರು.ಕೆಲವು ಕ್ಷೇತ್ರಗಳಲ್ಲಿ ಗೊಂದಲವಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೆ ಹೇಳಲಾಗುತ್ತಿದೆ. ಅದೆಲ್ಲ. ಬಗೆಹರಿಯಲಿದೆ. ಮುಂದಿನ ಮೂರು ದಿನಗಳಲ್ಲಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದರು.
ಗೋಬ್ಯಾಕ್ ಶೋಭಾ ಅಭಿ ಯಾನ ವ್ಯವಸ್ಥಿತವಾದ ಪಿತೂರಿ, ಇದರ ಹಿಂದೆ ಯಾರಿದ್ದಾರೆಂದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಿಂದ ಅವರು ದೃತಿಗೆಡುವುದಿಲ್ಲ ಕೇಂದ್ರದ ಸಚಿವೆಯಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ. ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದರು.
ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಹಾಗೂ ಸಭೆ ನಡೆಸುತ್ತಿರುವ ಬಗ್ಗೆ ತಮಗೆ ತಿಳಿದಿಲ್ಲ. ಯಾವುದು ಚರ್ಚೆಯಾಗಿಲ್ಲ ಎಂದರು.