ಹಾಸನ : ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆಯೇ ರಕ್ಕಸನಂತೆ ಟ್ರಕ್ ನುಗ್ಗಿದ್ದರಿಂದಾಗಿ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಉಸಿರು ಚೆಲ್ಲಿದ 9 ಮಂದಿಯ ಕುಟುಂಬಗಳ ಕಣ್ಣೀರ ಕಥೆಗಳೇ ಕರುಣಾಜನಕವಾಗಿವೆ.
ಈ ಹೃದಯ ವಿಧ್ರಾವಕ ಘಟನೆಯಿಂದ ಇಡೀ ಜಿಲ್ಲೆಯೇ ಶೋಕ ಸಾಗರದಲ್ಲಿ ಮುಳುಗಿದೆ.
ಈ ಘೋರ ದುರಂತದಲ್ಲಿ ಮೃತಪಟ್ಟವರಲ್ಲಿ ಯುವಕರೇ ಹೆಚ್ಚು. ಮನೆಗೆ ಆಧಾರವಾಗಬೇಕಿದ್ದ ಯುವಕರ ಭೀಕರ ಅಂತ್ಯವಾಗಿರುವುದು ದುರ್ದೈವ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಮೃತಪಟ್ಟ ಒಬ್ಬೊಬ್ಬರದ್ದೂ ಒಂದೊಂದು ಕಣ್ಣೀರ ಕಥೆಯಾಗಿದೆ.
ಮೃತಪಟ್ಟವರ ಪೈಕಿ 6 ಮಂದಿ ಸ್ಥಳೀಯ ನಿವಾಸಿಗಳು. ಉಳಿದ ಮೂವರು ಬಳ್ಳಾರಿ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯವರು ಎಂದು ಗುರುತಿಸಲಾಗಿದೆ.
ಮೃತ ದೇಹಗಳ ಹಸ್ತಾಂತರ:
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂಬತ್ತು ಮಂದಿಯ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ, ಇಂದು ಮುಂಜಾನೆ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಆರೋಗ್ಯ ಕೇಂದ್ರದ ಬಳಿ ಜಮಾಯಿಸಿದ ಮೃತರ ಪೋಷಕರು, ಸಂಬಂಧಿಕರು, ಸ್ನೇಹಿತರ ಗೋಳಾಟ ಕರಳು ಕಿವುಚುವಂತಿತ್ತು.
ಮೃತರ ವಿವರ:
ಬಳ್ಳಾರಿಯ ಪ್ರವೀಣ್ ಕುಮಾರ್, ಹೊಳೇನರಸೀಪುರ ತಾಲ್ಲೂಕಿನ ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಈಶ್ವರ (17), ಹಳೇ ಕೋಟೆ ಹೋಬಳಿಯ ಕಬ್ಬಿನಹಳ್ಳಿ ಗ್ರಾಮದ ಕುಮಾರ (25), ಪ್ರವೀಣ್, (25), ಕೆ.ಬಿ.ಪಾಳ್ಯದ ರಾಜೇಶ (17), ಮುತ್ತಿಗೆ ಹೀರಳ್ಳಿ ಗ್ರಾಮದ ಗೋಕುಲ (17), ಹಾಸನದ ಬಂಟರಹಳ್ಳಿಯ ಪ್ರಭಾಕರ್ (55), ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಗವಿಗಂಗಾಪುರ ಗ್ರಾಮದ ಮಿಥುನ್ (23) ಹಾಗೂ ಚಿಕ್ಕಮಗಳೂರು ಜಿಲ್ಲೆ ಮಣೆನಹಳ್ಳಿ ಮಲ್ಲೆ ಗ್ರಾಮದ ಸುರೇಶ ಮೃತ ದುರ್ದೈವಿಗಳು.
ಮೃತರ ಪೈಕಿ ಐದು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇವರು ಮೊಸಳೆಹೊಸಳ್ಳಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಎಂದು ಐಜಿಪಿ ಬೋರಲಿಂಗಯ್ಯ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಅಪಘಾತದಲ್ಲಿ ಗಾಯಗೊಂಡಿರುವ 20ಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಇನ್ನು ಕೆಲವು ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡಿರುವ 19 ಮಂದಿ ಪೈಕಿ ಇಬ್ಬರ ಸ್ಥಿತಿ ಸ್ಥಿರವಾಗಿದೆ. ಇಬ್ಬರು ಗಾಯಾಳುಗಳಿಗೆ ಪಕ್ಕೆಲುಬು ಮೂಳೆ ಮುರಿತವಾಗಿದ್ದರಿಂದ ಅವರನ್ನು ತುರ್ತು ಶಸ್ತ್ರ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಹುಟ್ಟುಹಬ್ಬ ದಿನವೇ ಯುವಕ ಸಾವು:
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ನಿವಾಸಿ ಮಿಥುನ್ ರಾತ್ರಿಯಷ್ಟೇ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ನಂತರ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡು ದುರಂತ ಅಂತ್ಯವಾಗಿರುವುದು ವಿಷಾದಕರ.
ಮನೆಗೆ ಆಧಾರವಾಗಬೇಕಾದವರೇ ದುರ್ಮರಣ:
ಈ ಅಪಘಾತದಲ್ಲಿ ಮೃತಪಟ್ಟ ಯುವಕರು 17 ರಿಂದ 25 ವಯೋಮಾನದವರು. ಇದು ಸಾಯುವ ವಯಸ್ಸಂತೂ ಅಲ್ಲವೇ ಅಲ್ಲ. ಎದೆಯುದ್ದ ಬೆಳೆದು ನಿಂತಿದ್ದ ಮಕ್ಕಳು ಮುಂದೊಂದು ದಿನ ಮನೆಗೆ ಆಧಾರವಾಗುತ್ತಾರೆ ಎಂದು ಪೋಷಕರು ಹಲವು ಕನಸು ಕಂಡಿದ್ದರು. ಈ ಯುವಕರೂ ಸಹ ವಿದ್ಯಾಭ್ಯಾಸ ಮಾಡಿ, ಉದ್ಯೋಗ ಪಡೆದುಕೊಳ್ಳುವ ಗುರಿ ಹೊಂದಿದ್ದರು. ಆದರೆ ಈ ಭೀಕರ ದುರಂತ ಯುವಕರ ಬದುಕನ್ನೇ ಅಂತ್ಯಗೊಳಿಸಿದರೆ, ಇನ್ನು ಅವರುಗಳ ಪೋಷಕರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
