ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣ ಸಂಬಂಧ ಜಾಮೀನು ರದ್ದಾದ ಹಿನ್ನೆಲೆ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರನ್ನು ಆರ್. ಆರ್. ನಗರದ ನಿವಾಸದಿಂದಲೇ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸರು ಪವಿತ್ರಾ ಗೌಡ ಅವರನ್ನು ಬಂಧಿಸಿದ್ದಾರೆ.
ಗುರುವಾರ ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮಹದೇವನ್ ಅವರ ವಿಭಾಗೀಯ ಪೀಠ ದರ್ಶನ್ ಆ್ಯಂಡ್ ಗ್ಯಾಂಗ್ನ ಜಾಮೀನು ಅರ್ಜಿ ತೀರ್ಪು ಪ್ರಕಟಿಸಿದೆ.
ಇನ್ನು ಪ್ರಕರಣದ ಎ11 ನಾಗರಾಜ್ ಆಲಿಯಾಸ್ ನಾಗಾ, ಎ12 ಲಕ್ಷ್ಮಣ್ ಹಾಗೂ ಎ14 ಆರೋಪಿ ಪ್ರದೋಶ್ ಅವರನ್ನು ಕೂಡ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿ, ಆ ಬಳಿಕ ಸೆಷನ್ಸ್ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇನ್ನು ನಟ ದರ್ಶನ್ ಅವರನ್ನು ಇಂದೇ ಬಂಧಿಸುವ ಸಾಧ್ಯತೆಯಿದೆ.
ಕೋರ್ಟ್ ಹೇಳಿದ್ದೇನು?:
“ಜಾಮೀನು ನೀಡಲು ಯಾವುದೇ ಕಾನೂನು ಕಾರಣವಿಲ್ಲ” ಎಂದು ಹೇಳಿದ ಪೀಠ, ದರ್ಶನ್ ಅವರ ಸ್ವಾತಂತ್ರ್ಯವು “ನ್ಯಾಯದ ಆಡಳಿತವನ್ನು ಹಳಿತಪ್ಪಿಸುವ ಅಪಾಯವನ್ನುಂಟುಮಾಡಿದೆ” ಎಂದು ಪೀಠ ಹೇಳಿದೆ.
“ಕಾನೂನಿಗಿಂತ ಯಾವುದೇ ವ್ಯಕ್ತಿ ದೊಡ್ಡವರಲ್ಲ, ಕಾನೂನಿಗೆ ವಿಧೇಯತೆ ಒಂದು ನಿಯಮ, ಉಪಕಾರವಲ್ಲ. ಕಸ್ಟಡಿಯಲ್ಲಿರುವ ದರ್ಶನ್ಗೆ ಯಾವುದೇ ವಿಶೇಷ ಉಪಚಾರ ನೀಡಬಾರದು” ಎಂದು ಪೀಠವು ರಾಜ್ಯ ಮತ್ತು ಜೈಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು.
“ಆರೋಪಿಗಳಿಗೆ ಜೈಲು ಆವರಣದಲ್ಲಿ ಪಂಚತಾರಾ ಗೌರವ ನೀಡಲಾಗುತ್ತಿದೆ ಎಂದು ನಮಗೆ ತಿಳಿದ ದಿನವೇ ನಾವು ಜೈಲು ಸೂಪರಿಂಟೆಂಡೆಂಟ್ ಅನ್ನು ಅಮಾನತುಗೊಳಿಸುತ್ತೇವೆ” ಎಂದು ನ್ಯಾ.ಪಾರ್ದಿವಾಲಾ ಹೇಳಿದ್ದಾರೆ.
