ಬಾಗಲಕೋಟೆ: ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಕ್ಫ್ ಕ್ಯಾತೆ ತೆಗೆದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಅಲ್ಲಮಪ್ರಭು ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯತ್ನಾಳ್ ಅವರನ್ನು ಸ್ಥಳದಲ್ಲಿ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿಂದೂ ದೇವಸ್ಥಾನಗಳು ವಕ್ಫ್ ಆಸ್ತಿಗಳಾಗುತ್ತಿವೆ. ವಕ್ಫ್ ಕಾಯ್ದೆ ಬ್ರಿಟಿಷರಿಗಿಂತ ಅಪಾಯಕಾರಿ ಆಗಿದೆ. ಈ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ದೇಶದಲ್ಲಿ ಮಿನಿ ಪಾಕಿಸ್ತಾನ ತಯಾರು ಆಗುತ್ತಿರುವಂತಿದೆ’ ಎಂದು, ಯತ್ನಾಳ್ ಅವರು ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಜನರು ತಕರಾರು ಎತ್ತಿದರು. ನೀವು ಇಲ್ಲಿ ರಾಜಕಾರಣ ಮಾಡಲು ಬರಬೇಡಿ ಎಂದು ನೇರವಾಗಿ ಹೇಳಿದರು.
ಇದು ಯಾವ ಕಾರ್ಯಕ್ರಮ ನೀವು ಏನು ಮಾತಾಡುತ್ತಿದ್ದೀರಿ. ದೇವಸ್ಥಾನ ನಿರ್ಮಾಣಕ್ಕೆ ಎಲ್ಲ ಸಮುದಾಯವರು ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು 6 ಲಕ್ಷ ರೂ.ದೇಣಿಗೆ ಕೊಟ್ಟಿದ್ದಾರೆ. ಇದು ರಾಜಕೀಯ ಮಾತಾನಾಡುವ ಜಾಗ ಅಲ್ಲʼ ಎಂದು ತರಾಟೆ ತೆಗೆದುಕೊಂಡಿದ್ದಾರೆ.
ಈ ವೇಳೆ ‘ಇದು ರಾಜಕೀಯ ಭಾಷಣವಲ್ಲ’ ಎಂದು ಯತ್ನಾಳ ಹೇಳಲು ಮುಂದಾದರು. ಆಗ, ಅಲ್ಲಿದ್ದವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ‘ಸರಿ ಆಯಿತು’ ಎಂದು ಯತ್ನಾಳ್ ಅವರು ಅಸಮಾಧಾನಗೊಂಡು ಭಾಷಣ ನಿಲ್ಲಿಸಿ, ವೇದಿಕೆಯಿಂದ ಹೊರ ನಡೆದರು.
ವಕ್ಫ್ ವಿಚಾರ ಸಂಬಂಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕರಿಂದ ಪ್ರತಿರೋಧ ಎದುರಿಸಿದ್ದಾರೆ.