ಹುಬ್ಬಳ್ಳಿ : ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ, ಕಾಂಗ್ರೆಸ್ ಶಾಸಕರೂ ಆಗಿರುವ ವಿಜಯಾನಂದ್ ಕಾಶಪ್ಪನವರ್ ನಡುವಿನ ಭಿನ್ನಾಭಿಪ್ರಾಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮೊನ್ನೇ ಅಷ್ಟೇ ವಿಜಯಾನಂದ್ ಕಾಶಪ್ಪನವರ್, ಕೂಡಲಸಂಗಮ ಪೀಠಕ್ಕೆ ಬೀಗ ಹಾಕಿಸಿದ್ದರು. ಇದಾದ ಬೆನ್ನಲ್ಲೇ ಜಯಮೃತ್ಯುಂಜಯ ಸ್ವಾಮೀಜಿ ಭಕ್ತ ಜತೆ ಸಭೆ ನಡೆಸಿ ಪೀಠಕ್ಕೆ ಪ್ರವೇಶ ಮಾಡಿದ್ದರು. ಇದಾದ ಬಳಿಕ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ, ಸ್ವಾಮೀಜಿ ಊಟದಲ್ಲಿ ವಿಷ ಹಾಕಿ ಕೊಲೆಗೆ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಎರಡು ದಿನಗಳ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಟ್ರಸ್ಟ್ ನ ಅಧ್ಯಕ್ಷರು ಆಗಿರುವ ಶಾಸಕ ವಿಜಯಾನಂದ್ ಕಾಶಪ್ಪನವರ,ಜಯಮೃತ್ಯುಂಜಯ ಸ್ವಾಮೀಜಿ ವಿರುದ್ದ ಅನೇಕ ಆರೋಪ ಮಾಡಿದ್ದರು. ಜೊತೆಗೆ ಸ್ವಾಮೀಜಿ ಮಠದಲ್ಲಿ ಇರದೇ ಇರುವುದರಿಂದ ಪೀಠಕ್ಕೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳುವ ಮೂಲಕ ಪರೋಕ್ಷವಾಗಿ ಜಯಮೃತ್ಯುಂಜಯ ಸ್ವಾಮೀಜಿಯನ್ನು ಪೀಠದಿಂದ ಕೆಳಗಿಳಿಸುವ ಕೆಲಸ ಆರಂಭವಾಗಿರುವ ಬಗ್ಗೆ ಹೇಳಿದ್ದರು.
ಅಂದೇ ಜಯಮೃತ್ಯುಂಜಯ ಸ್ವಾಮೀಜಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಹಿನ್ನೆಲೆಯಲ್ಲಿ ಜಯಮೃುತ್ಯುಂಜಯ ಸ್ವಾಮೀಜಿಯನ್ನು ಕೊಲೆ ಮಾಡುವ ಯತ್ನ ನಡೆದಿದೆಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಈ ಬಗ್ಗೆ ಪಂಚಮಸಾಲಿ ಸಮುದಾಯದ ಹಿರಿಯ ಮುಖಂಡ ಹಾಗೂ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಪ್ರತಿಕ್ರಿಯಿಸಿ, ಸ್ವತಃ ಜಯಮೃತ್ಯುಂಜಯ ಸ್ವಾಮೀಜಿ ಇಂತಹದೊಂದು ಶಂಕೆಯನ್ನು ತಮ್ಮ ಮುಂದೆ ವ್ಯಕ್ತಪಡಿಸಿರುವುದಾಗಿ ಹೇಳಿದ್ದಾರೆ. ಜುಲೈ 19ರಂದು ಮಠದಲ್ಲಿ ಸ್ವಾಮೀಜಿ ಅಸ್ವಸ್ಥರಾಗಿದ್ದರು. ಆದ್ರೆ ಅಂದು ಇಬ್ಬರು ಮುಸ್ಲಿಂ ಯುವಕರು ಅಡುಗೆ ಮನೆಗೆ ಹೋಗಿದ್ದರಂತೆ. ಅವರನ್ನು ಕೆಲಸಕ್ಕೆ ಇಟ್ಟಿರುವುದು ಇದೇ ವಿಜಯನಾಂದ್ ಕಾಶಪ್ಪನವರಂತೆ. ಅವರು ಅಡುಗೆ ಮನೆಗೆ ಹೋಗಿ ಬಂದ ನಂತರ ಸ್ವಾಮೀಜಿ ಪ್ರಸಾದ ಸ್ವೀಕರಿಸಿದ್ದಂತೆ.
ಪ್ರಸಾದ ಸ್ವೀಕರಿಸಿದ ಕೆಲವೇ ಹೊತ್ತಲ್ಲಿ ಅವರಿಗೆ ವಾಂತಿಬೇಧಿ ಸೇರಿದಂತೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ಸೇವಿಸಿರುವ ಆಹಾರದಲ್ಲಿ ಏನಾದ್ರು ವಿಷ ಬೆರೆಸಿರುವ ಅನುಮಾನವಿದೆಯಂತೆ. ಹೀಗಂತ ಸ್ವತಃ ಸ್ವಾಮೀಜಿ ತಮ್ಮ ಮುಂದೆ ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
