ಭದ್ರಾವತಿ : ಇಲ್ಲಿನ ಸಿದ್ದಾರ್ಥ ಅಂಧರ ಕೇಂದ್ರದ ಆವರಣದಲ್ಲಿ 60ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಮರಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ನಗರಸಭಾ ಅಧ್ಯಕ್ಷೆ ಗೀತಾ ರಾಜಕುಮಾರ್ ಪರಿಸರ ನಾಶದಿಂದ ಹವಮಾನ ವೈಪರಿತ್ಯ ಉಂಟಾಗಿ ಕಾಲ ಕಾಲಕ್ಕೆ ಮಳೆ ಬೆಳೆ ಆಗದೆ ಅತಿವೃಷ್ಟಿ ಅನಾವೃಷ್ಟಿ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ನಗರಸಭೆಯ ಆಯುಕ್ತ ಪ್ರಕಾಶ್ ಚನ್ನಪ್ಪ ಮಾತನಾಡಿ,ನಗರೀಕರಣ ಬೆಳೆದಂತೆಲ್ಲ ಗಿಡಮರಗಳ ನಾಶ ಹೆಚ್ಚಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಗಿಡಮರಗಳನ್ನು ಕಡಿದು ಹಾಕುತ್ತೇವೆ. ಆದರೆ ಅಷ್ಟೇ ಗಿಡ ಮರಗಳನ್ನ ಮತ್ತೆ ಬೆಳೆಸಬೇಕೆಂಬ ಪ್ರಜ್ಞೆ ನಮ್ಮಲ್ಲಿ ಇಲ್ಲದಿರುವುದು ದುರಂತ ಎಂದರು.
ಎಸ್ಎಲ್ಎನ್ ಡೇ ಕೇರ್ ನ ಡಾ. ಸುಸಿತ್ ಶೆಟ್ಟಿ ಮಾತನಾಡಿ, ಮನುಷ್ಯನ ಉಸಿರಾಟಕ್ಕೆ ಆಮ್ಲಜನಕವನ್ನು ನೀಡುವ ಪರಿಸರದ ರಕ್ಷಣೆ ಮಾಡುವುದು ಸಾರ್ವಜನಿಕರ ಕರ್ತವ್ಯವಾಗಿದೆ. ಪರಿಸರ ಉಳಿಸುವ ಪ್ರಜ್ಞೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದರು.
ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಕಾರ್ಯದರ್ಶಿ ಹಾಗೂ ಡಿಎಸ್ಎಸ್ ನ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರಿಯಾಜ್, ಸದಸ್ಯ ಚನ್ನಪ್ಪ, ಕಾಂಚನ ಹೋಟೆಲ್ನ ಮಾಲೀಕ ವಾಗೀಶ್, ಸಿದ್ದಾರ್ಥ ಅಂಧರ ಕೇಂದ್ರದ ಟ್ರಸ್ಟಿ ಬಿ. ಎ. ಕಾಟ್ಕೆ, ಎಂ ಪಿ ಎಂ ಪ್ರೌಢಶಾಲೆಯ ನಿವೃತ್ತ ಅಧ್ಯಾಪಕ ಶ್ರೀನಿವಾಸ್, ಎಸ್ ಜೆ ಎಂ ಕಾಲೇಜಿನ ನಿವೃತ್ತ ಉದ್ಯೋಗಿ ರಾಜಶೇಖರ್ ಉಪಸ್ಥಿತರಿದ್ದರು.

