Trending

ಭದ್ರಾವತಿ : ಕಾರ್ಮಿಕ ಚಳವಳಿಯ ಹಿರಿಯ ನಾಯಕ ಕಾಮ್ರೇಡ್ ಡಿ.ಸಿ. ಮಾಯಣ್ಣ ವಿಧಿವಶ

Spread the love

ಭದ್ರಾವತಿ : ನಗರದ ಹಿರಿಯ ಕಾರ್ಮಿಕ ಹೋರಾಟಗಾರ ಹಾಗೂ ಸಿಪಿಐ ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಡಿ.ಸಿ. ಮಾಯಣ್ಣ (92) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಕಾಮ್ರೇಡ್ ಡಿ.ಸಿ. ಮಾಯಣ್ಣ ಅವರು ಆರಂಭದಿಂದಲೂ ಕಾರ್ಮಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸುವುದರ ಜೊತೆಗೆ ಪ್ರಗತಿಪರ ಸಂಘಟನೆಗಳ ಅನೇಕ ಚಳವಳಿಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪ್ರಸ್ತುತ ಅವರು ಸಿಪಿಐ ರಾಜ್ಯ ಸಮಿತಿ ಸದಸ್ಯರಾಗಿದ್ದರು.

ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ನಗರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಪ್ರಗತಿಪರ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಸಂಘ–ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಮಿಕ ಹೋರಾಟಗಾರರು, ಕಾರ್ಮಿಕ ವರ್ಗದವರು, ಅಭಿಮಾನಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಜಾತಿ–ಪಕ್ಷಭೇದ ಮರೆತು ಸಂತಾಪ ಸೂಚಿಸಿದ್ದಾರೆ.

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಿಂದ ಬೊಮ್ಮನಕಟ್ಟೆಯಲ್ಲಿರುವ ಅವರ ನಿವಾಸದವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಕಾಮ್ರೇಡ್ ಡಿ.ಸಿ. ಮಾಯಣ್ಣ ಅವರ ಅಂತ್ಯಸಂಸ್ಕಾರ ಶನಿವಾರ ಸಂಜೆ ಬೊಮ್ಮನಕಟ್ಟೆಯಲ್ಲಿರುವ ಅವರ ತೋಟದಲ್ಲಿ ನೆರವೇರಲಿದೆ.

 ಮೂಕನಾಯಕ ಪತ್ರಿಕಾ ಬಳಗ ಸಂತಾಪ 

ಕಾರ್ಮಿಕ ಮುಖಂಡ, ನಡೆದಾಡುವ ಕೋಶ, ಹಿರಿಯ ಕಮ್ಯುನಿಸ್ಟ್ ನೇತಾರ ಡಿ.ಸಿ.ಮಾಯಣ್ಣ  ಕಾರ್ಮಿಕರ ಕಾನೂನುಗಳೊಂದಿಗೆ ಜನಪರ, ಪ್ರಗತಿಪರ ನಿಲುವುಗಳಿಂದ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಅವರು, ಆಯಾ ಕಾಲಘಟ್ಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ಜನವಿರೋಧಿ ನಿರ್ಧಾರಗಳನ್ನು ಖಂಡಿಸಿ ಮೂಕನಾಯಕ ಪತ್ರಿಕೆ ಸೇರಿದಂತೆ ಅನೇಕ ರಾಜ್ಯ ಹಾಗೂ ದೇಶಿಯ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಸರ್ಕಾರದ ಗಮನ ಸೆಳೆಯುತ್ತಿದ್ದರು, ಅಂತಹ ಸರಳ, ಸಜ್ಜನಿಕೆಯ ಸಾರ್ಥಕ ಬದುಕು ಸವೆಸಿದ ಹಿರಿಯ ಜೀವ ನಮ್ಮನ್ನು ಬಿಟ್ಟು ಅಗಲಿರುವುದು ಕಾರ್ಮಿಕ ನಗರಿ ಸೇರಿದಂತೆ ಈ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಮೂಕನಾಯಕ ಬಳಗ ಸಂತಾಪ ಕೋರುತ್ತದೆ.
[pj-news-ticker]