ಅಂಕೋಲಾ: ಗೊಬ್ಬರದ ಗುಂಡಿಗೆ ಬಿದ್ದು, ಎರಡೂವರೆ ವರ್ಷದ ಮಗು ಮೃತಪಟ್ಟ ಘಟನೆ ತಾಲೂಕಿನ ಡೊಂಗ್ರಿ ಗ್ರಾ.ಪಂ. ವ್ಯಾಪ್ತಿಯ ಹಳವಳ್ಳಿ ಎಂಬಲ್ಲಿ ನಡೆದಿದೆ.
ಹಳವಳ್ಳಿ ಗ್ರಾಮದ ಮೂಲೆಮನೆಯ ಶ್ರೀಕಾಂತ್ ಹೆಬ್ಬಾರ್-ರೂಪಾ ದಂಪತಿಯ ದ್ವಿತೀಯ ಪುತ್ರಿ ಸಾದ್ವಿ ಶ್ರೀಕಾಂತ್ ಹೆಬ್ಬಾರ್ (2.3) ಮೃತಪಟ್ಟ ಮಗು.
ಬೆಳಿಗ್ಗೆ ಎಂದಿನಂತೆ ಸಾದ್ವಿ ತನ್ನ ತಂದೆಯೊಂದಿಗೆ ದನದ ಕೊಟ್ಟಿಗೆ ಬಳಿ ತೆರಳಿದ್ದಳು. ತಂದೆ ಕೊಟ್ಟಿಗೆಯ ಕೆಲಸದಲ್ಲಿ ಮಗ್ನರಾಗಿದ್ದರು. ಹೀಗಾಗಿ ಮಗಳ ಚಲನವಲನವನ್ನು ಆತ ಗಮನಿಸಿರಲಿಲ್ಲ.
ಕೆಲ ಸಮಯದ ಬಳಿಕ ಮಗಳ ಸದ್ದು ಕೇಳಿಸದೆ ಇದ್ದುದರಿಂದ ಸುತ್ತ ಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಸಾದ್ವಿ ಗೊಬ್ಬರ ಗುಂಡಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣ ಗುಂಡಿಯಿಂದ ಆಕೆಯನ್ನು ಮೇಲಕೆತ್ತಿ ತಾಲೂಕು ಆಸ್ಪತ್ರೆ ಕರೆ ತಂದಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ಮಗು ಸಾವನ್ನಪ್ಪಿರುವ ಬಗ್ಗೆ ದೃಢಪಡಿಸಿದ್ದಾರೆ. ಪುಟ್ಟ ಕಂದಮ್ಮನ ಸಾವಿನಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.
