ಶಿವಮೊಗ್ಗ: ಜಾನಪದದಲ್ಲಿ ಜೀವನ ಮೌಲ್ಯ, ಬದುಕಿನ ಸಾರ ಆಡಗಿದೆ ಎಂದು ಕನ್ನಡ ಜಾನಪದ ಪರಿಷತ್ ಶಿವಮೊಗ್ಗ
ಜಿಲ್ಲಾ ಘಟಕದ ನಿರ್ದೇಶಕಿ, ಕರ್ನಾಟಕ ವಿಭೂಷಣ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಕವಿತಾ ಸುಧೀಂದ್ರ ಹೇಳಿದರು.
ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಜಾನಪದ ಅರಿವು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಜಾನಪದ ಕಲೆ ಶ್ರೀಮಂತವಾಗಿದ್ದು ಬದುಕನ್ನು ಸುಂದರವಾಗಿ ಕಟ್ಟಿಕೊಡುವ ಪ್ರಮುಖ ಸಾಧನವಾಗಿದೆ. ನಮ್ಮ ಪುರಾತನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಪರಸ್ಪರ ಸಂಬಂಧಗಳು ಮರೆಯಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಜಾನಪದ ಕಲೆಯ ಮಹತ್ವವನ್ನು ಯುವಜನರಿಗೆ ತಿಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
ಕನ್ನಡ ಜಾನಪದ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕ ಅಧ್ಯಕ್ಷ ಡಾ. ವೆಂಕಟೇಶ್, ಜಾನಪದ ಪರಿಷತ್ತಿನ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕನ್ನಡ ಜಾನಪದ ಪರಿಷತ್ ಕಾರ್ಯದರ್ಶಿ ಡಾ. ಡಿ. ಬಿ. ಶಿವರುದ್ರಪ್ಪ ಮಾತನಾಡಿ, ಪಿಯು ಮಟ್ಟದ ವಿದ್ಯಾರ್ಥಿಗಳದು ಬದುಕನ್ನು ರೂಪಿಸಿಕೊಳ್ಳುವ ಮಹತ್ವದ ಕಾಲಘಟ್ಟ. ಅದರ ಜೊತೆಗೆ ಇತರ ಒಳ್ಳೆಯ ಹವ್ಯಾಸಗಳು ಅಗತ್ಯ. ಇವರಲ್ಲಿ ‘ಜಾನಪದದ ಪ್ರಜ್ಞೆಯು ಮೊದಲು ಪ್ರಯತ್ನಶೀಲವಾಗುವುದಕ್ಕಿಂತ ಸಹಜಶೀಲವಾಗಬೇಕು ಎಂದು ಹೇಳಿದರು.
ಜಾನಪದ ಪರಿಷತ್ ಶಿವಮೊಗ್ಗ ಜಿಲ್ಲಾ ಘಟಕದ ನಿರ್ದೇಶಕಿ ಪ್ರೊ ಮಮತಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾನಪದ ಅರಿವು ಬದುಕಿನ ಪಥವನ್ನು ಬದಲಾಯಿಸುತ್ತದೆ ಎಂದರು.
ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಹರ್ಷ ಅವರು ವಿದ್ಯಾರ್ಥಿಗಳಿಗೆ ಜಾನಪದ ಹಾಡುಗಳನ್ನು ಹೇಳಿ ಅದರ ಮಹತ್ವ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಈಶ್ವರಪ್ಪ ಜಾನಪದ ಹಾಡು -ಹಸೆ ಚಿತ್ತಾರ,ಗೀಗಿ ಪದ ಇತ್ಯಾದಿಗಳನ್ನು ಕಲಿತು ಅದರ ಮೌಲ್ಯವನ್ನು ತಿಳಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಟರಾಜ್, ಡಾ. ಉದಯ್ ಕುಮಾರ್, ಡಾ. ಪ್ರೀತಮ್, ಗಜೇಂದ್ರ, ತಿಮ್ಮೆಶಪ್ಪ, ಸಂದೇಶ್, ಶ್ರೀನಿವಾಸ್, ರೋಹಿಣಿ, ನಾಗೇಶ್ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.
