ಬೆಂಗಳೂರು: ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಾಚರಣೆಗೆ ಬಂದಿದ್ದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರಿ ನೂಕುನುಗ್ಗಲು ಹಾಗೂ ಕಾಲ್ತುಳಿತ ಸಂಭವಿಸಿದ್ದು, ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ತುರ್ತು ಸುದ್ದಿಗೋಷ್ಠಿ ನಡೆಸಿದರು.
ಪ್ರಕರಣದಲ್ಲಿ 11 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ಘೋಷಿಸಿದ ಅವರು, ಗಾಯಾಳುಗಳಿಗೆ ಸರ್ಕಾರದಿಂದಲೇ ಉಚಿತ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಇದೊಂದು ಅನಿರೀಕ್ಷಿತ ಘಟನೆ ಎಂದು ವಿಷಾಧಿಸಿದ ಅವರು, ಸಂಭ್ರಮಾಚರಣೆಗೆ ಇದ್ದಕ್ಕಿದ್ದಂತೆ ಲಕ್ಷಾಂತರ ಜನರು ಬಂದಿದ್ದರಿಂದ ಹೀಗಾಗಿದೆ ಎಂದು ಅವರು ಹೇಳಿದರು. ಈ ಘಟನೆ ಆಗಬಾರದಾಗಿತ್ತು ಎಂದು ಹೇಳಿದರು.
ಮ್ಯಾಜಿಸ್ಟೇಟ್ ತನಿಖೆ: ಈ ಘಟನೆಯ ಬಗ್ಗೆ ಮ್ಯಾಜಿಸ್ಟೇಟ್ ತನಿಖೆ ನಡೆಸಲಾಗುವುದು. ಈ ದುರುಂತ ಆಗಬಾರದಾಗಿತ್ತು, ಆದರೆ ನಡೆದು ಹೋಗಿದೆ ಎಂದರು. ಸರ್ಕಾರ ಭದ್ರತೆ ಕೊಡಬೇಕು. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರು ಇದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.
ನಿರೀಕ್ಷೆಗೂ ಮೀರಿ ಜನ ಸೇರಿದ್ದೇ ದುರಂತಕ್ಕೆ ಕಾರಣ: ಬೋರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸಂಭ್ರಮಾಚರಣೆ ಮಾಡುವಾಗ ಇಂಥ ದುರಂತ ನಡೆಯಬಾರದಿತ್ತು. ಸರ್ಕಾರ ಇದಕ್ಕೋಸ್ಕರ ಬಹಳ ದುಖ: ವ್ಯಕ್ತಪಡಿಸುತ್ತದೆ. ನಿರೀಕ್ಷೆಗೂ ಮೀರಿ ಅಭಿಮಾನಿಗಳು ಸೇರಿದ್ದರು. ವಿಧಾನಸೌಧ ಎದರು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ವಿಧಾನಸೌಧ ಮುಂದೆ ನಡೆದ ಸಮಾರಂಭದಲ್ಲಿ ಅನಿರೀಕ್ಷಿತ ದುರಂತ ನಡೆದಿಲ್ಲ. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ದುರಂತ ಆಗಿದೆ ಎಂದು ಸಿಎಂ ಹೇಳಿದರು.
ಚಿಕಿತ್ಸೆ ಪಡೆದು ಡಿಚಾರ್ಜ್ ಆದವರು ಸೇರಿ ಘಟನೆಯಲ್ಲಿ ಸುಮಾರು 47 ಜನ ಒಟ್ಟು ಗಾಯಾಳುಗಳಾಗಿದ್ದಾರೆ. ಅವರೆಲ್ಲರೂ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಎಂ ಹೇಳಿದರು.
