ಬೆಂಗಳೂರು: ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ (Gun license) ಕೊಡಬೇಕು ಎಂದು ಸೂಚಿಸಿದ್ದೆ. ಇದಿನ್ನೂ ಕೆಲವು ಕಡೆ ಜಾರಿಗೆ ಬಂದಿಲ್ಲ. ಕುರಿಗಳ್ಳರು ಕುರಿಗಳನ್ನು ಕದಿಯುವ ಜತೆಗೆ, ಕುರಿಗಾಹಿಗಳನ್ನು ಕೊಲೆ ಮಾಡಿರುವ ಘಟನೆಗಳೂ ಕೂಡ ನಡೆದಿವೆ. ಹೀಗಾಗಿ ಬಂದೂಕು ಪರವಾನಗಿ ಕೊಡುವುದನ್ನು ಸಮರ್ಪಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.
ವಿಧಾನಸೌಧದಲ್ಲಿ ಶನಿವಾರ ನಡೆದ ಡಿಸಿ, ಸಿಇಒಗಳ ಸಭೆಯಲ್ಲಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮುಖ್ಯಮಂತ್ರಿಗಳು ಮಾತನಾಡಿದರು.
ಕುರಿಗಾಹಿಗಳಿಗೆ ಬಂದೂಕು ಪರವಾನಗಿ ನೀಡುವ ಬಗ್ಗೆ ಸಿಎಂ ಮಾತನಾಡಿದಾಗ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪ್ರತಿಕ್ರಿಯಿಸಿ, ಕುರಿಗಾಹಿಗಳಿಗೆ ಬಂದೂಕು ನೀಡುವ ಕಾರ್ಯದ ಬಗ್ಗೆ ನಿಗಾ ಇಡಲು ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸುವುದಾಗಿ ತಿಳಿಸಿದರು.
ಕುರಿಗಾಹಿಗಳ ಮೇಲೆ ಅರಣ್ಯ ಇಲಾಖೆಯವರು ಅವೈಜ್ಞಾನಿಕವಾಗಿ ಕೇಸು ದಾಖಲಿಸುವುದು ಮತ್ತು ಅನಗತ್ಯ ತೊಂದರೆ ಕೊಡುವ ಬಗ್ಗೆ ವರದಿಗಳು, ದೂರುಗಳು ಬಂದಿವೆ. ಇದನ್ನು ನಿಲ್ಲಿಸಬೇಕು. ಕುರಿಗಳು ತಲೆ ಎತ್ತಿ ಮೇಯುವುದಿಲ್ಲ. ಅವು ತಲೆ ಬಗ್ಗಿಸಿಕೊಂಡು ಮೇಯುವುದರಿಂದ ಅರಣ್ಯ ಸಿಬ್ಬಂದಿಯ ತಪ್ಪು ಗ್ರಹಿಕೆಯಿಂದ ಕುರಿಗಾಹಿಗಳಿಗೆ ತೊಂದರೆ ಆಗುತ್ತಿದೆ, ಇದನ್ನು ತಪ್ಪಿಸಿ ಎಂದರು.
