ಬೀದರ್: ಆಪರೇಷನ್ ಸಿಂಧೂರ ಯಶಸ್ಸಿನ ಹಿನ್ನೆಲೆಯಲ್ಲಿ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಆಯೋಜಿಸಿದ್ದ ತಿರಂಗ ಯಾತ್ರೆ ವೇಳೆ ಶಾಸಕ ಪ್ರಭು ಚವ್ಹಾಣ್ ಅಸ್ವಸ್ಥರಾದ ಘಟನೆ ಸೋಮವಾರ ನಡೆದಿದೆ.
ಇಲ್ಲಿನ ಪ್ರವಾಸಿ ಮಂದಿರದಿಂದ ಆರಂಭವಾದ ಯಾತ್ರೆ ಬಸವೇಶ್ವರ ವೃತ್ತದ ಮೂಲಕ ಎಪಿಎಂಸಿ ವೃತ್ತಕ್ಕೆ ತಲುಪಿ ಸಮಾವೇಶಗೊಂಡಿತು. ಈ ವೇಳೆ ಶಾಸಕ ಚವ್ಹಾಣ್ ಅಸ್ವಸ್ಥರಾದರು. ತಕ್ಷಣ ಅವರನ್ನು ಕಾರಿನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ ನಂತರ ಕೆಲಕಾಲ ವಿಶ್ರಾಂತಿ ಪಡೆದು ಬಳಿಕ ಸ್ವಗ್ರಾಮ ಬೊಂತಿಗೆ ತೆರಳಿದರು. ಯಾತ್ರೆಯಲ್ಲಿ ಚವ್ಹಾಣ್ ಹೆಜ್ಜೆ ಹಾಕಿ ದಣಿದಿದ್ದರಿಂದ ಸುಸ್ತಾಗಿ ತಲೆ ಸುತ್ತಿದೆ. ಬೇರೆ ಯಾವ ಸಮಸ್ಯೆ ಇಲ್ಲ ಎಂದು ಶಾಸಕರ ಆಪ್ತರು ತಿಳಿಸಿದ್ದಾರೆ.
ಬೃಹತ್ ಯಾತ್ರೆ: ಭಾರತೀಯ ಸೈನಿಕರ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆಯ ನಿಮಿತ್ತ ಔರಾದ್ ಪಟ್ಟಣದಲ್ಲಿ ತಿರಂಗ ಯಾತ್ರೆ ಸೋಮವಾರ ಅದ್ಧೂರಿಯಾಗಿ ಜರುಗಿತು. ಶಾಸಕರಾದ ಪ್ರಭು ಬಿ.ಚವ್ಹಾಣ್ ಅವರು ಪಟ್ಟಣದ ಪ್ರವಾಸಿ ಮಂದಿರದ ಬಳಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಿರಂಗಯಾತ್ರೆಗೆ ಚಾಲನೆ ನೀಡಿದರು.
