ಬೆಳಗಾವಿ: ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಉಗ್ರರ ಮಾರಣಹೋಮ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಸೈನಿಕರ ಸಂಘ, ಬಿಜೆಪಿ ಯುವ ಮೋರ್ಚಾ ಸೇರಿ ವಿವಿಧ ಸಂಘಟನೆಗಳು ಬೆಳಗಾವಿಯಲ್ಲಿ ವಿಜಯೋತ್ಸವ ಆಚರಿಸಿದವು.
ಬೆಳಗಾವಿ ಜಿ.ಪಂ ಕಚೇರಿ ಮುಂದೆ ಮಾಜಿ ಸೈನಿಕರು ಕೈಯಲ್ಲಿ ಭಾರತದ ಬಾವುಟ ಹಿಡಿದು ಸಿಹಿ ಹಂಚಿ ಸಂಭ್ರಮಿಸಿದರೆ, ನಗರದ ಸಂಭಾಜಿ ಮಹಾರಾಜ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು. ಈ ವೇಳೆ ತಾಯಿ ಭಾರತಾಂಬೆ, ಭಾರತೀಯ ಸೈನಿಕರಿಗೆ ಜೈಕಾರ ಕೂಗಿ ಅಭಿಮಾನ ಪ್ರದರ್ಶಿಸಿದರು.
ಶಿವಮೊಗ್ಗದಲ್ಲಿ ವಿಶೇಷ ಪೂಜೆ : ಪಾಕಿಸ್ತಾನ ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತೀಯ ಯೋಧರು ಸುರಕ್ಷಿತವಾಗಿರಲೆಂದು ರಾಷ್ಟ್ರಭಕ್ತರ ಬಳಗ ರವೀಂದ್ರನಗರ ಬಲಮುರಿ ಗಣಪತಿ ದೇವಾಲಯದಲ್ಲಿ ಸೈನಿಕರ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಿದೆ.
ದೇಶದ ಸೈನಿಕರಿಗೆ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ನಡೆಸಲು ವಿಘ್ನ ವಿನಾಯಕ ಇನ್ನಷ್ಟು ಶಕ್ತಿ ನೀಡಲಿ ಎಂದು ಬೇಡಿಕೊಳ್ಳಲಾಯಿತು. ದೇವಾಲಯದ ಹೊರಗಡೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.
ಬಳಗದ ಕೆ.ಈ.ಕಾಂತೇಶ್ ಮಾತನಾಡಿ, “ಭಾರತ ಮಾತೆಯ ಸಿಂಧೂರ ಜಮ್ಮು ಮತ್ತು ಕಾಶ್ಮೀರ ಎಂಬ ಘೋಷಣೆಯನ್ನು ನಾವು ಪ್ರತಿ ಬಾರಿ ಕೂಗುತ್ತಾ ಬರುತ್ತಿದ್ದೇವೆ. ಕಾಶ್ಮೀರ ಭಾರತ ಮಾತೆಯ ಮುಕುಟ. ಪಹಲ್ಗಾಮ್ನಲ್ಲಿ 25 ಜನ ಸಹೋದರಿಯರ ಸಿಂಧೂರವನ್ನು ಅಳಿಸುವಂತಹ ಕೆಲಸವನ್ನು ಮಾಡಿದ್ದಾರೆ. ದೇಶದ ಹೆಮ್ಮೆಯ ಪುತ್ರರು ಅದಕ್ಕೆ ಪ್ರತ್ಯುತ್ತರವನ್ನು ಕೊಟ್ಟಿದ್ದಾರೆ. ಅಖಂಡ ಭಾರತದ ಕನಸು ನನಸಾಗುವ ಸಂದರ್ಭ ಎದುರು ನೋಡುತ್ತಿದ್ದೇವೆ. ನರೇಂದ್ರ ಮೋದಿ, ಭಾರತೀಯ ಸೈನಿಕರಿಗೆ ಹೆಚ್ಚಿನ ಶಕ್ತಿ ನೀಡಲಿ” ಎಂದರು.
